ಹಾವೇರಿ: ಜಿಲ್ಲೆಯಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಈವರೆಗೆ ಒಟ್ಟು 149 ಮನೆಗಳು ಭಾಗಶಃ ಹಾನಿಗೀಡಾಗಿವೆ. ಮೂವರು ಜನರು, 15 ಜಾನುವಾರುಗಳು ಮೃತಪಟ್ಟ ವರದಿಯಾಗಿದೆ.
ಸವಣೂರ ತಾಲೂಕಿನ 52, ಶಿಗ್ಗಾಂವಿ 39, ಹಾವೇರಿ ತಾಲೂಕಿನ 12, ರಾಣೆಬೆನ್ನೂರ 3, ಬ್ಯಾಡಗಿ 8, ರಟ್ಟೀಹಳ್ಳಿ 8, ಹಾನಗಲ್ಲ ತಾಲ್ಲೂಕಿನಲ್ಲಿ 13 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾವೇರಿಯ 1, ಶಿಗ್ಗಾಂವಿಯ 3, ಹಾನಗಲ್ಲನ 11 ಸೇರಿ ಜಿಲ್ಲೆಯಲ್ಲಿ ಒಟ್ಟು 15 ಜಾನುವಾರುಗಳು ಮೃತಪಟ್ಟಿವೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಮೃತ ಜಾನುವಾರುಗಳ ಮಾಲೀಕರಿಗೆ ಒಟ್ಟು 1.94 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ.
ಹಾನಗಲ್ಲ ತಾಲೂಕಿನ ಮಹಾರಾಜಪೇಟೆ ಗ್ರಾಮದ ನಾಗರಾಜ ಲಕ್ಕಪ್ಪ ಮುತ್ತಿನಹಾಳ (23) ಸಿಡಿಲು ಬಡಿದು ಮೃತಪಟ್ಟಿದ್ದರು. ಹಾನಗಲ್ಲ ತಾಲೂಕಿನ ಕಲ್ಲಾಪುರ ಗ್ರಾಮದ ಯಮನಪ್ಪ ಬಂಡಿವಡ್ಡರ (24) ನದಿಯಲ್ಲಿ ತೇಲಿ ಹೋಗಿ ಮೃತಪಟ್ಟಿದ್ದರು. ಹಾವೇರಿ ತಾಲೂಕಿನ ಮಾಳಾಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದು ಮೂರು ವರ್ಷದ ಮಗು ಭಾಗ್ಯ ಚಲಮರದ ಮೃತಪಟ್ಟಿತ್ತು. ಈ ಮೂವರ ಕುಟುಂಬದವರಿಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 15 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಹಾನಿಯಾದ ಮನೆಗಳ ಬಗ್ಗೆ ಅಧಿಕಾರಿಗಳ ತನಿಖಾ ತಂಡ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ ನಂತರ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
232 ಮಿ.ಮೀ. ಮಳೆ, ಅಪಾರ ಹಾನಿ
ಜಿಲ್ಲೆಯಲ್ಲಿ ಜುಲೈ 18ರಿಂದ 24ರ ವರೆಗೆ 36.2 ಮಿ.ಮೀ. ವಾಡಿಕೆ ಮಳೆಗೆ 111.4 ಮಿ.ಮೀ. ಮಳೆಯಾಗಿದ್ದು, ಶೇ.208ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್ ತಿಂಗಳಲ್ಲಿ 248 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 232 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಬಾಳೆ, ತೆಂಗು, ವೀಳ್ಯದೆಲೆ, ಪಪ್ಪಾಯ, ಹಾಗಲಕಾಯಿ, ಮೆಣಸಿನಕಾಯಿ, ಸೌತೆಕಾಯಿ, ಟೊಮೆಟೊ, ನುಗ್ಗೆ ಸೇರಿದಂತೆ 82.98 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ.
ಶೇ.87ರಷ್ಟು ಬಿತ್ತನೆ
ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಇದ್ದು, ಈವರೆಗೆ ಶೇ.87ರಷ್ಟು ಬಿತ್ತನೆಯಾಗಿದೆ. ತೋಟಗಾರಿಕಾ ಬೆಳೆಗಳ ಬಿತ್ತನೆ ಕ್ಷೇತ್ರದ ಗುರಿ 21,667 ಹೆಕ್ಟೇರ್ ಇದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 9,197 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.