ಜಿಲ್ಲೆ

ಬಂದೂಕು ತರಬೇತಿ ಪಡೆದವರು ಪೊಲೀಸ್ ಸ್ನೇಹಿತರು; ಡಿಆರ್ ಪೊಲೀಸ್ ಉಪಾಧೀಕ್ಷಕ ಎನ್.ಎಂ.ಹನಕನಹಳ್ಳಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಾಗರಿಕ ಬಂದೂಕು ತರಬೇತಿ ಪಡೆದವರು ಪೊಲೀಸ್ ಇಲಾಖೆಯ ಸ್ನೇಹಿತರಾಗಿದ್ದು, ನಿಮ್ಮ ಊರು, ಕೇರಿಗಳಲ್ಲಿ ಏನಾದರೂ ಅನಾಹುತಗಳು ನಡೆಯುವ ಸಂಭವ ಇದ್ದಾಗ ನಮ್ಮ ಗಮನಕ್ಕೆ ತನ್ನಿ. ನಿಮ್ಮಿಂದ ಸಾವಿರಾರು ಜನರನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಡಿಆರ್ ಪೊಲೀಸ್ ಉಪಾಧೀಕ್ಷಕ ಎನ್.ಎಂ.ಹನಕನಹಳ್ಳಿ ಹೇಳಿದರು.
ನಗರದ ಹಳೇ ಕೋರ್ಟ್ ಕಟ್ಟಡದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಪಡೆದ ಎರಡನೇ ಬ್ಯಾಚ್‌ನ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಗರಿಕ ಬಂದೂಕು ತರಬೇತಿ ಪಡೆದ ಎಲ್ಲ ಶಿಬಿರಾರ್ಥಿಗಳು ಸಮಾಜದಲ್ಲಿ ಉತ್ತಮ ನಡತೆಯನ್ನು ಕಾಪಾಡಿಕೊಳ್ಳಬೇಕು. ತರಬೇತಿಯಲ್ಲಿ ಕಲಿತ ಪಾಠಗಳನ್ನು ಅಳವಡಿಸಿಕೊಂಡು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ಸದಾ ನಿಮ್ಮೊಂದಿಗೆ ಇರುತ್ತದೆ. ಆತ್ಮರಕ್ಷಣೆಗೆ ಗನ್ ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ನಾಗರಿಕ ಬಂದೂಕು ತರಬೇತಿ ಪಡೆದುಕೊಂಡ ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ಬಂದೂಕು, ರಿವಾಲ್ವರ್, ಪಿಸ್ತೂಲ್ ಪರವಾನಿಗೆ ನೀಡಲಾಗುತ್ತದೆ. ಬಂದೂಕು ಪಡೆದುಕೊಂಡ ಮೇಲೆ ಇಲಾಖೆ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ, ಜಾಗೃತಿಯಿಂದ ಇರಬೇಕು ಎಂದು ಸಲಹೆ ನೀಡಿದರು.
ಬಂದೂಕು ತರಬೇತಿ ನೀಡಿದ ಎಲ್.ಜಿ.ಅಸುಂಡಿ, ಬಿ.ಸಿ.ವಡೇರಹಳ್ಳಿ, ಬಿ.ಎಚ್.ಕಬ್ಬೇರ, ಸಿದ್ದಪ್ಪ ಹನ್ನಾಳಿ, ಎಸ್.ಎಸ್.ಅರಳಿ, ಎಂ.ಎಸ್.ಕಟಗಿ, ಬಿ.ಎಸ್.ವಾಳದ, ಎಂ.ಟಿ.ತಳವಾರ, ಡಿ.ಎನ್.ಜಗಪಾತ ಅವರನ್ನು ಶಿಬಿರಾರ್ಥಿಗಳು ಸನ್ಮಾನಿಸಿದರು.
ತರಬೇತಿ ಪಡೆದ 97 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನಂತರ ಶಿಬಿರಾರ್ಥಿಗಳ ಪರವಾಗಿ ಸುಧೀರ ಅಂಗಡಿ ಹಾಗೂ ಗುರುಪಾದಗೌಡ ಪಾಟೀಲ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಆರ್‌ಪಿಐ ಶಂಕರಗೌಡ ಪಾಟೀಲ, ಡಿಆರ್ ಆರ್‌ಎಸ್‌ಐ ಸಿ.ಬಿ.ಪೂಜಾರ, ಎಆರ್ ಎಸ್‌ಐ ಎಲ್.ಜಿ.ಅಸುಂಡಿ, ಸಿಬ್ಬಂದಿ, ಶಿಬಿರಾರ್ಥಿಗಳು ಹಾಜರಿದ್ದರು.
ಫೈರಿಂಗ್‌ನಲ್ಲಿ ರವಿಕಿರಣ ಪ್ರಥಮ
ಬಂದೂಕು ತರಬೇತಿಯಲ್ಲಿ ಪೈರಿಂಗ್ ಪರೀಕ್ಷೆಯಲ್ಲಿ ರವಿಕಿರಣ ತಿಪ್ಪಶೆಟ್ಟಿ ಪ್ರಥಮ, ಆಕಾಶ ಯಡಹಳ್ಳಿ ದ್ವೀತಿಯ, ಶಿವಾಜಿ ಹತ್ತಿ ಹಾಗೂ ಮದನ ಹಿಟ್ಟಣಿಗಿ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಡಿವೈಎಸ್ಪಿ ಎಂ.ಎನ್.ಹನಕನಹಳ್ಳಿ ಬಹುಮಾನ ವಿತರಿಸಿದರು.