ಹಾವೇರಿ: ಆಲದಕಟ್ಟಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತದ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪಟಾಕಿ ಅಂಗಡಿ ಮಾಲೀಕರಾದ ದಾವಣಗೆರೆಯ ಕೆ.ಬಿ.ಜಯಣ್ಣ, ಸಿ.ಜಿ.ವೀರೇಶ, ವಿಜಯ ಯರೇಸೀಮಿ ಹಾಗೂ ಹಾವೇರಿಯ ಕುಮಾರಪ್ಪ ಸಾತೇನಹಳ್ಳಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಟಾಕಿ ಸಂಗ್ರಹಿಸಿಟ್ಟಿರುವ ಗೋದಾಮಿನಲ್ಲಿ ವೆಲ್ಡಿಂಗ್ ಮಾಡಿದರೆ ಬೆಂಕಿ ಅನಾಹುತ ಸಂಭವಿಸಿ ಜೀವಹಾನಿಯಾಗುವ ಸಂಭವ ಇದೆ ಎಂದು ಗೊತ್ತಿದ್ದರೂ ಅಂಗಡಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಕೆಲಸಗಾರರಿಗೆ ಜೀವರಕ್ಷಣಾ ಸಾಮಗ್ರಿ ಕೊಟ್ಟಿಲ್ಲ. ಪಟಾಕಿ ಗೋದಾಮಿನ ಒಳಗೆ ಪಟಾಕಿ ಇಟ್ಟುಕೊಂಡು ಕಿಟಕಿಯ ಗ್ರಿಲ್‌ಗೆ ವೆಲ್ಡಿಂಗ್ ಮಾಡಿಸುವಾಗ ಬೆಂಕಿ ಅವಘಡ ಸಂಭವಿಸಿದೆ. ಕೆಲಸ ಮಾಡುತ್ತಿದ್ದ ಕಾಟೇನಹಳ್ಳಿಯ ದ್ಯಾಮಪ್ಪ ಓಲೇಕಾರ, ರಮೇಶ ಬಾರ್ಕಿ, ಶಿವಲಿಂಗಪ್ಪ ಅಕ್ಕಿ ಹಾಗೂ ದಾವಣಗೆರೆಯ ಕೆ.ಬಿ. ಜಯಣ್ಣ ಸಜೀವ ದಹನವಾಗಿದ್ದಾರೆ. ವೆಲ್ಡಿಂಗ್ ಮಾಡುತ್ತಿದ್ದ ಹರಿಹರ ತಾಲೂಕಿನ ತೆಗ್ಗಿನಕೇರಿ ನಿವಾಸಿಗಳಾದ ವಾಸೀಂ ಶಫಿ ಅಹ್ಮದ್ ಹಾಗೂ ಶೇರೂ ವಹಾಬಸಾಬ ಕಟ್ಟಿ ಗಾಯಗೊಂಡಿದ್ದು, ದಾವಣೆಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ಕು ಬೈಕ್ ಸುಟ್ಟಿವೆ ಎಂದು ದೂರಿನಲ್ಲಿ ವರದಿಯಾಗಿದೆ.
ಕೋಟ್:
ಆರೋಪಿಗಳಾದ ಪಟಾಕಿ ಅಂಗಡಿ ಮಾಲೀಕರಾದ ವೀರೇಶ ಸಿ.ಜಿ ಹಾಗೂ ಕುಮಾರಪ್ಪ ಸಾತೇನಹಳ್ಳಿ ಎಂಬುವರನ್ನು ಬಂಧಿಸಲಾಗಿದೆ. ವಿಜಯ ಯರೇಶೀಮಿ ನಾಪತ್ತೆಯಾಗಿದ್ದಾರೆ. ಮತ್ತೋರ್ವ ಆರೋಪಿ ಕೆ.ಬಿ. ಜಯಣ್ಣ ಘಟನೆಯಲ್ಲಿ ಮೃತಪಟ್ಟಿದ್ದಾರೆ. ತನಿಖೆ ಮುಂದುವರೆದಿದೆ.
ಶಿವಕುಮಾರ ಗುಣಾರೆ, ಎಸ್‌ಪಿ, ಹಾವೇರಿ