ಜಿಲ್ಲೆ

ಕುಲಾಂತರಿ ತಳಿ ತಿರಸ್ಕರಿಸಲು ರೈತರ ಆಗ್ರಹ; ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕುಲಾಂತರಿ ತಳಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಸಂಪೂರ್ಣವಾಗಿ ತಿರಸ್ಕರಿಸಬೇಕು, ರೈತರ ಬಾಕಿ 67 ಕೋಟಿ ರೂ. ಬೆಳೆ ವಿಮೆ ಬಾಕಿ ಬಿಡುಗಡೆ, ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆ ವತಿಯಿಂದ ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನಗರದ ಕಾಗಿನೆಲೆ ಕ್ರಾಸ್‌ನಿಂದ ಬೃಹತ್ ಬೈಕ್ ರ‌್ಯಾಲಿ ಮೂಲಕ ಪ್ರತಿಭಟನೆ ಆರಂಭಿಸಿದ ನೂರಾರು ರೈತರು, ಪಿ.ಬಿ.ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತ, ಮುನ್ಸಿಪಲ್ ಹೈಸ್ಕೂಲ್ ರೋಡ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ನಂತರ ರೈತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಪ್ರದರ್ಶಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಬರಗಾಲ ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸುತ್ತಿದ್ದು ಬೆಳೆ ಪರಿಹಾರ ಕೊಡುವಲ್ಲಿ ಸರ್ಕಾರ ವಿಫಲವಾಗಿವೆ. ನಮ್ಮನ್ನು ಆಳುವ ಸರ್ಕಾರಗಳು ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ಹಗರಣ ಆರೋಪ ಪ್ರತ್ಯೋರೋಪ ಮಾಡುವುದರ ಮುಖಾಂತರ ಕಾಲಹರಣ ಮಾಡುತ್ತಿದ್ದು, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.
2023-24ನೇ ಸಾಲಿನ ಬೆಳೆವಿಮೆಯಲ್ಲಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ. ಅಸಮರ್ಪಕ ವಿಮಾ ನೀತಿಯಿಂದ ರೈತಕುಲ ನಲುಗಿದೆ. ಹೆಸ್ಕಾಂ ಕಂಪನಿ ಬೋರ್‌ವೆಲ್ ಹಾಕಿಸಿದ ರೈತರಿಂದ ಮೊದಲಿನ ರೀತಿ ಅರ್ಜಿ ತೆಗೆದುಕೊಳ್ಳಬೇಕು. ರೈತರ ತೋಟಗಳಲ್ಲಿ ಹಾದುಹೋದ ವಿದ್ಯುತ್ ಲೈನ್‌ಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಅಡಕೆ ಬೆಳೆಗಾರರ ಬೆಳೆವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈತ ವಿರೋಧಿಯಾಗಿರುವ ಕುಲಾಂತರಿ ಬೀಜ ವಿಶೇಷ ಕಾನೂನು ಸಂಪೂರ್ಣ ತಿರಸ್ಕರಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವಬಸಪ್ಪ ಗೋವಿ, ಎಚ್.ಎಚ್. ಮುಲ್ಲಾ, ಶಿವಯೋಗಿ ಹೊಸಗೌಡ್ರ, ಮಲ್ಲನಗೌಡ್ರ ಮಾಳಗಿ, ಯಶವಂತ ಎಡಗೋಡಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
40 ಕೋಟಿ ಮಂಜೂರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ರೈತರ ಅಹವಾಲು ಆಲಿಸಿ ಮಾತನಾಡಿದರು. 2023-24ನೇ ಸಾಲಿನ ಬಾಕಿ ಉಳಿದಿರುವ 67 ಕೋಟಿ ಬೆಳೆವಿಮೆ ಪರಿಹಾರ ಹಣದಲ್ಲಿ 40 ಕೋಟಿ ರೂ. ಮಂಜೂರಾಗಿದೆ. ಶೀಘ್ರದಲ್ಲಿಯೇ ಹಣ ಬಿಡುಗಡೆಯಾಗಲಿದೆ. ಇನ್ನುಳಿದ ಬಾಕಿ ಪರಿಹಾರ ಹಣ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.