ಹಾವೇರಿ: ರೈತನೊಬ್ಬನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕ ಚೆಕ್ ತೆಗೆದುಕೊಂಡು 8 ಲಕ್ಷ ರೂ. ನೀಡುವಂತೆ ರೈತರಿಗೆ ಲಿಗಲ್ ನೋಟಿಸ್ ಜಾರಿಗೊಳಿಸುವ ಮೂಲಕ ಮೋಸ ಎಸಗಿದ ಪ್ರಕರಣದ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನಗರದ ಉಜ್ಜೀವನ ಬ್ಯಾಂಕ್ ವ್ಯವಸ್ಥಾಪಕ, ಸಹಾಯಕ ಕೃಷಿ ನಿರ್ದೇಶಕ ಹಾಗೂ ತಾಲೂಕಿನ ಕುರುಬಗೊಂಡ ಗ್ರಾಮದ ಉಮೇಶ ಶಿವಾನಂದಪ್ಪ ಹೆಡಿಯಾಲ, ಶಿಕಾರಿಪುರದ ಹನುಮಂತಪ್ಪ ಮಹಾದೇವಪ್ಪ ಎಂಬುವರ ವಿರುದ್ಧ ದೂರು ದಾಖಲಾಗಿರುವುದು.
ಕುರುಬಗೊಂಡ ಗ್ರಾಮದ ಅಶೋಕ ಶಿವಪುತ್ರಪ್ಪ ಹೆಡಿಯಾಲ ಎಂಬ ರೈತ ದೂರು ದಾಖಲಿಸಿದ್ದು, ಆರೋಪಿಗಳು 2021 ಜುಲೈ 18ರಂದು ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಅಲ್ಲದೆ ಅದೇ ಖಾತೆಯಿಂದ ಚೆಕ್‌ಅನ್ನು ಪಡೆದುಕೊಂಡಿದ್ದಾರೆ. ಇದೀಗ ನನಗೆ 8 ಲಕ್ಷ ರೂ. ನೀಡುವಂತೆ ಲಿಗಲ್ ನೋಟಿಸ್ ಜಾರಿ ಮಾಡುವ ಮೂಲಕ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.