ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡನೆಗೂ ಮುನ್ನವೇ ಕಳೆದ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಎಷ್ಟು ? ಖರ್ಚಾಗಿರುವ ಹಣ ಎಷ್ಟು ? ಎಂಬ ಕುರಿತು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ ವಿಫಲವಾಗಿದೆ ಎಂಬ ಕುರಿತು ಬ್ಲಾೃಕ್ ಪೇಪರ್ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಘಟಕ ಸಿದ್ಧರಾಗಬೇಕು ಎಂದು ಸೂಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ನಿಗಮಗಳ ಅಧಿಕಾರಿಗಳ ಸಭೆ ನಡೆಸಿದರು. ಈ ವರ್ಷ ಹಿಂದುಳಿದ ವರ್ಗಗಳ ನಿಗಮಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂದು ಚರ್ಚೆಯೇ ಆಗಲಿಲ್ಲ. ಹಿಂದುಳಿದ ವರ್ಗಗಳ ನಾಯಕರು ಸಿಎಂರನ್ನು ಕೇಳಬೇಕಿತ್ತು. ಅದನ್ನು ವಿರೋಧ ಪಕ್ಷವಾಗಿ ಬಿಜೆಪಿ ಮಾಡುತ್ತದೆ ಎಂದರು.
ಹೊಸ ವಿವಿಗಳನ್ನು ಮುಚ್ಚುವುದು ಅನ್ಯಾಯ
ರಾಜ್ಯದಲ್ಲಿ ಹೊಸ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ದೊಡ್ಡ ಅನ್ಯಾಯ. ಡಿಜಿಟಲ್ ವೇದಿಕೆ ಬಂದ ಮೇಲೆ ದೊಡ್ಡ ಕ್ಯಾಂಪಸ್‌ಗಳು ಬೇಕಿಲ್ಲ. ಆತ್ಯಂತ ಕಡಿಮೆ ವೆಚ್ಚದಲ್ಲಿ ವಿವಿ ನಡೆಸಬಹುದು ಎನ್ನುವುದನ್ನು ಕಳೆದ ಎರಡು ವರ್ಷಗಳಲ್ಲಿ ಎಂಟು ವಿವಿಗಳು ನಡೆಸಿ ತೋರಿಸಿವೆ. ಹಳೆಯ ವಿವಿಗಳಿಗೆ ರಾಜ್ಯ ಸರ್ಕಾರ ನೂರಾರು ಕೋಟಿ ರೂ. ನೀಡುತ್ತದೆ. ಆದರೆ, ಅಲ್ಲಿ ಸಂಬಳ, ಪಿಂಚಣಿ ಕೊಡಲು ಆಗುತ್ತಿಲ್ಲ. ಪ್ರಾಧ್ಯಾಪಕರಿದ್ದಲ್ಲಿ ವಿದ್ಯಾರ್ಥಿಗಳಿಲ್ಲ. ಕೇವಲ ಭ್ರಷ್ಟಾಚಾರದ ಕೂಪಗಳಾಗಿವೆ. ಎರಡು ವರ್ಷಗಳಲ್ಲಿ ಹೊಸ ವಿವಿಗಳು ಉತ್ತಮ ಕೆಲಸ ಮಾಡಿವೆ. ಕೇವಲ 20 ದಿನದಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಅನೇಕ ವಿದ್ಯಾರ್ಥಿನಿಯರು ದೂರದ ಊರುಗಳಿಗೆ ಉನ್ನತ ಶಿಕ್ಷಣ ಕಲಿಯಲು ಹೋಗಲು ಆಗುತಿಲ್ಲ. ಇಲ್ಲಿಯೇ ವಿವಿ ಇರುವುದರಿಂದ ಅನೇಕ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣ ಕಲಿಸಲು ಕಳುಹಿಸುತ್ತಿದ್ದಾರೆ. ಆದರೆ, ಬಿಜೆಪಿ ಅವಧಿಯಲ್ಲಿ ವಿವಿಗಳು ಸ್ಥಾಪನೆ ಆಗಿವೆ ಎನ್ನುವ ಒಂದು ಕಾರಣಕ್ಕೆ ಅವುಗಳನ್ನು ಮುಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೊಮ್ಮಾಯಿ ದೂರಿದರು.
ಸಿಎಂ ಸೈಟ್ ಯಾಕೆ ವಾಪಸ್ ಕೊಟ್ಟರು ?
ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವುದು ನಿರೀಕ್ಷಿತ, ಲೋಕಾಯುಕ್ತ ಸಿಎಂ ವಿರುದ್ಧ ಮೃದು ಧೋರಣೆ ತಾಳಿದೆ. ಇಡಿ ತನಿಖೆಯ ಬಗ್ಗೆ ಕೋರ್ಟ್ ತೀರ್ಮಾನ ಮಾಡಬೇಕಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕೂಡ ಕೋರ್ಟ್‌ನಲ್ಲಿ ಪರಿಶೀಲನೆ ಆಗಲಿದೆ. ಅಂತಿಮವಾಗಿ ಸತ್ಯ ಹೊರ ಬರಲಿದೆ. ಸಿದ್ದರಾಮಯ್ಯ ಸೇರಿದಂತೆ ಹಲವಾರು ಜನರು ಸೈಟುಗಳನ್ನು ಪಡೆದಿರುವುದರಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ. ಎಲ್ಲವೂ ಸರಿಯಾಗಿದ್ದರೆ ಮುಖ್ಯಮಂತ್ರಿಗಳು ಸೈಟ್‌ಗಳನ್ನು ಯಾಕೆ ವಾಪಸ್ ಕೊಟ್ಟರು ಎನ್ನುವುದಕ್ಕೆ ಉತ್ತರ ಕೊಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.
ಗೃಹ ಲಕ್ಷ್ಮೀಗೆ ಗ್ರಹಣ
ಹೀಗಾಗಿ ಗೃಹಲಕ್ಷ್ಮೀ ಯೋಜನೆಗೆ ಗ್ರಹಣ ಹಿಡಿದಿದೆ. ಚುನಾವಣೆ ಸಂದರ್ಭದಲ್ಲಿ ಮತದಾನದ ಹಿಂದಿನ ದಿನ ಮತದಾರರಿಗೆ ನೀಡಿ ಅಧಿಕೃತ ಲಂಚಕೊಡುವ ವ್ಯವಸ್ಥೆಯಾಗುತ್ತಿದೆ. ಇದನ್ನು ನೋಡಿಯೂ ಚುನಾವಣಾ ಆಯೋಗವೂ ಕಣ್ಣು ಮುಚ್ಚಿ ಕುಳಿತಿದೆ. ಇಂಧನ ಸಚಿವ ಜಾರ್ಜ್, ಇದೇನು ಸಂಬಳವೇ ಎಂದು ಹೇಳಿದ್ದಾರೆ. ಇದು ಸಂಬಳ ಅಲ್ಲ ಗೌರವ ಧನ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ, ಗೌರವ ಧನವನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ಹೆಣ್ಣುಮಕ್ಕಳಿಗೆ ಗೌರವ ನೀಡಿಲ್ಲ ಎಂದು ಅರ್ಥ. ಇಲ್ಲಿ ಯಾರೂ ಭಿಕ್ಷೆ ಬೇಡಲು ನಿಂತಿಲ್ಲ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.