ಜಿಲ್ಲೆ

ಸಿಎಂ ಸಿದ್ದರಾಮಯ್ಯ ಹತಾಶರಾಗಿದ್ದಾರೆ; ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕಾಂಗ್ರೆಸ್‌ನ 50 ಶಾಸಕರನ್ನು ಬಿಜೆಪಿಯವರು ಖರೀದಿ ಮಾಡಲು ಮುಂದಾಗಿದ್ದಾರೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹತಾಶರಾಗಿ ಆಧಾರ ರಹಿತವಾದ ಹೇಳಿಕೆ ನೀಡಿದ್ದಾರೆ. ತಮ್ಮ ಅಸ್ತಿತ್ವಕ್ಕೆ ದಕ್ಕೆ ಬಂದಾಗ, ಅವರ ಮೇಲಿನ ಆಪಾದನೆಯನ್ನು ಬೇರೆ ಕಡೆಗೆ ತಿರುಗಿಸಲು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೂರೂವರೆ ವರ್ಷ ನಾನೇ ಸಿ.ಎಂ ಅಂತಾರೆ. ಮತ್ತೊಂದು ಕಡೆ ನನಗೆ ಶಕ್ತಿ ಕೊಡಿ ಅಂತಾರೆ. ಐದು ವರ್ಷ ಅಧಿಕಾರ ಪೂರ್ಣ ಮಾಡಬೇಕು. ಮಳೆ ಹಾನಿಗೆ ಸಾಕಷ್ಟು ಬೆಳೆಗಳು ಹಾನಿಯಾಗಿದೆ. ಒಂದೇ ಒಂದು ಪರಿಹಾರ ಬರುತ್ತಿಲ್ಲ. ಸರ್ಕಾರ ಗೊಂದಲದಲ್ಲಿದೆ. ಇದು ಯೂಟನ್ ಸರ್ಕಾರ. ಮುಸ್ಲಿಂ ಗುತ್ತಿಗೆದಾರರಿಗೆ ಶೇ. ನಾಲ್ಕರಷ್ಟು ರಿಯಾಯ್ತಿ ನೀಡುತ್ತೇವೆ ಅಂತಾರೆ. ಆದರೆ, ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದಲ್ಲಿ ಸಹ ಸೈಟ್ ತೆಗೆದುಕೊಂಡಿಲ್ಲ ಅಂದು ವಾಪಸು ಕೊಡುತ್ತೇವೆ ಅಂತಾರೆ. ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಅಧಿಕಾರಿ ಮೇಲೆ ದೊಡ್ಡ ಪ್ರಮಾಣದ ರಾಜಕೀಯ ಒತ್ತಡ ಹಾಕುತ್ತಾರೆ. ಪ್ರತಿಯೊಂದು ಇಲಾಖೆಯಲ್ಲಿ ಕಲೆಕ್ಷನ್ ಸೆಂಟರ್‌ಗಳು ಆಗಿವೆ ಎಂದು ದೂರಿದರು.

ಮುಖ್ಯಮಂತ್ರಿಗಳು ಇವತ್ತು ಒಂದು ಮಾತು ಹೇಳಿದ್ದಾರೆ. ನನ್ನ ಮುಟ್ಟಿದರೆ ಜನರು ಸುಮ್ಮನೆ ಇರಲ್ಲ ಅಂದಿದ್ದಾರೆ. ಮುಖ್ಯಮಂತ್ರಿ ಹೇಳಿದಾಗ ಜನರು ಸುಮ್ಮನೆ ಇರಲ್ಲ ನಿಜ. ಜನರು ಪರವಾನಗಿ ಕೆಲಸ ಮಾಡಿದಾಗ ಮಾತ್ರ ಸುಮ್ಮನೆ ಇರಲ್ಲ. ಸರ್ಕಾರದ ದುರಾಡಳಿತ ವಿರುದ್ಧವೂ ಸಹ ಜನರು ಸುಮ್ಮನೆ ಇರಲಿಲ್ಲ. ಸರ್ಕಾರ ಖಬರಸ್ಥಾನಕ್ಕೆ ನೂರಾರು ಎಕರೆ ಜಮೀನು ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅದೇನು ಆಶ್ಚರ್ಯ ಏನಿಲ್ಲ. ಇಂತಹ ಹಲವಾರು ನಿರ್ಣಯ ಮಾಡಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ನೈತಿಕತೆಯ ಕುಸಿದು ಹೋಗಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಹಾವೇರಿ ಜಿಲ್ಲೆಯ ಜಮೀನು, ಮಠ, ಶಾಲೆ ,ಕೆರೆ ಅವುಗಳ ದಾಖಲೆಗಳನ್ನು ಕೊಟ್ಟರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.