ಜಿಲ್ಲೆ

38 ಸೇವೆ ಸಲ್ಲಿಸಿದ ನಿವೃತ್ತ ಯೋಧನಿಗೆ ಆತ್ಮೀಯ ಸ್ವಾಗತ; ಹಾವೇರಿಯಲ್ಲಿ ಪ್ರಭಾಕರ ಕರಿಶೆಟ್ಟರ್ ಅದ್ಧೂರಿ ಮೆರವಣಿಗೆ ಮೂಲಕ ವೆಲ್‌ಕಮ್

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಸಿಆರ್‌ಪಿಎಫ್‌ನಲ್ಲಿ 38 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಇನ್‌ಸ್ಪೆಕ್ಟರ್ ಹುದ್ದೆಯಿಂದ ನಿವೃತ್ತಿ ಹೊಂದಿದ ತಾಲೂಕಿನ ಹೊಸರಿತ್ತಿಯ ಪ್ರಭಾಕರ ಕರಿಶೆಟ್ಟರ್ ಅವರನ್ನು ನಗರದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ವಂದೇ ಭಾರತ್ ರೈಲಿನ ಮೂಲಕ ಬೆಳಗ್ಗೆ ಬೆಂಗಳೂರಿನಿಂದ ಹಾವೇರಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಭಾಕರ ಕರಿಶೆಟ್ಟರ್ ದಂಪತಿಯನ್ನು ಸನ್ಮಾನಿಸಿ, ಸಾರೋಟಿನ ಮೂಲಕ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಹುಕ್ಕೇರಿಮಠ, ಎಂಜಿ ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಹೊಸಮನವಿ ಸಿದ್ದಪ್ಪನವರ ಪುತ್ಥಳಿಗೆ ಪ್ರಭಾಕರ ಅವರು ಮಾಲಾರ್ಪಣೆ ಮಾಡಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ದೇಶದಲ್ಲಿ ನಾವೆಲ್ಲ ನೆಮ್ಮದಿಯಿಂದ ಬದುಕಲು ಯೋಧರು ಹಾಗೂ ರೈತರು ಕಾರಣ. ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ 27 ಹಿಂದುಗಳ ಹತ್ಯೆಯಾದ ನಂತರ ಭಾರತ ಮತ್ತು ಭಾರತೀಯ ಸೈನಿಕರ ತಾಕತ್ತು ಏನು ಎಂಬುದು ವಿಶ್ವಕ್ಕೆ ಗೊತ್ತಾಗಿದೆ. ಪ್ರಭಾಕರ ಅವರು 38 ವರ್ಷ ಸೇವೆ ಸಲ್ಲಿಸಿ ಮರಳಿರುವುದು ಹೆಮ್ಮೆಯ ವಿಷಯ ಎಂದರು.

ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಭಾರತೀಯ ಸೇನೆ ಬಲಿಷ್ಠವಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಸೈನಿಕರ ತ್ಯಾಗ, ಬಲಿದಾನಗಳಿಂದ ದೇಶ ಭದ್ರವಾಗಿದೆ. 38 ವರ್ಷಗಳ ಕಾಲ ಪ್ರಭಾಕರ ಅವರ ಸೇವೆ ಅವಿಸ್ಮರಣೀಯ. ಅವರ ವೈಯಕ್ತಿಕ ಜೀವನ ಸುಖಕರವಾಗಿರಲಿ ಎಂದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, 20, 25 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರನ್ನು ನೋಡಿದ್ದೇವೆ. 38 ವರ್ಷ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಯೋಧರು ಬಹುಶಃ ಇವರೇ ಮೊದಲಿಗರು ಇರಬೇಕು. ಆರಂಭದಲ್ಲಿ ಸೈನಿಕರಾಗಿ ಸೇರಿಕೊಂಡು ಇನ್ಸ್‌ಪೆಕ್ಟರ್ ಅಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಇವರ ಸೇವೆ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.

ಮಾಜಿ ಯೋಧ ವೀರಭದ್ರೇಶ್ವರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಯೋಧರಾದ ಕೆ.ಸಿ ಕೋರಿ, ಶಿವಪುತ್ರಪ್ಪ ಕಡ್ಲಿ, ಶಂಕ್ರಪ್ಪ ಕರಮಡಿ, ಚನ್ನಬಸಪ್ಪ ಹಾವೇರಿ, ಶ್ರೀನಿವಾಸ ಯರೇಸೀಮಿ, ಎಬಿವಿಪಿ ಸಂಚಾಲಕ ಅಭಿಷೇಕ ದೊಡ್ಡಮನಿ, ನಿರಂಜನ ಹೇರೂರ, ಇತರರಿದ್ದರು.