ಜಿಲ್ಲೆ

ಅರ್ಚನಾ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಿ; ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹ

ಹಾವೇರಿ: ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಆಕೆಯ ಕುಟುಂಬದವರಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹಿಸಿದರು.
ಇಲ್ಲಿನ ದೇವಗಿರಿಯ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಶ್ರೀರಾಮ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಡೆತ್‌ನೋಟ್‌ನಲ್ಲಿ ಶಾಲೆಯ ಶಿಕ್ಷಕನ ಹೆಂಡತಿ ಕಿರುಕುಳ ನೀಡಿರುವ ಕುರಿತು ಅರ್ಚನಾ ಬರೆದಿದ್ದಾಳೆ. ಆದರೂ ಇದನ್ನು ಮುಚ್ಚಿಟ್ಟು ಅಂತ್ಯಸಂಸ್ಕಾರ ಮಾಡಲಾಗಿದೆ. 10 ದಿನಗಳ ನಂತರ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಸ್ಥಳೀಯ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಒಬ್ಬ ವಾಲ್ಮೀಕಿ ಸಮಾಜದ ಬಾಲಕಿಯ ಸಾವಿನ ಬಗ್ಗೆ ಸರ್ಕಾರ ನಿರ್ಲಕ್ಷೃ ವಹಿಸುವುದನ್ನು ಸಹಿಸುವುದಿಲ್ಲ. ಈಗಾಗಲೇ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಕೊಳ್ಳೆ ಹೊಡೆಯಲಾಗಿದ್ದು, ಇದೀಗ ಸಮುದಾಯದ ಬಾಲಕಿಗೆ ಅನ್ಯಾಯ ಆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಈ ಕೂಡಲೇ ತಪ್ಪಿತಸ್ಥ ಶಿಕ್ಷಕರನ್ನು ಅಮಾನತುಗೊಳಿಸಬೇಕು, ಆರೋಪಿತರನ್ನು ಬಂಧಿಸಿ ಆಕೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದರು ಒತ್ತಾಯಿಸಿದರು. ಶಿಗ್ಗಾಂವಿ ಉಪಚುನಾವಣೆಗೆ ಸ್ಪರ್ಧಿಸುವ ಕುರಿತು ಈವರೆಗೆ ನಿರ್ಧರಿಸಿಲ್ಲ. ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುತ್ತೇನೆ ಎಂದರು.
ಸೇನೆಯ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಧಾರವಾಡ ವಿಭಾಗ ಅಧ್ಯಕ್ಷ ಗದಿಗೆಪ್ಪ ಕುರುವತ್ತಿ, ಇತರರಿದ್ದರು.
ಬಂಕಾಪುರ ದರ್ಗಾ ತೆರವಿಗೆ ಒತ್ತಾಯ
ಬಂಕಾಪುರ ಪಟ್ಟಣದ ಮುಖ್ಯರಸ್ತೆಯಲ್ಲಿನ ದರ್ಗಾವನ್ನು ಈ ಕೂಡಲೇ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕು. ಸುಪ್ರೀಂಕೋರ್ಟ್ ಆದೇಶವಿದ್ದರೂ ಹಲವು ವರ್ಷಗಳಿಂದ ಇದನ್ನು ತೆರವುಗೊಳಿಸಿಲ್ಲ. ಇಲ್ಲಿ ಇದ್ದ ಹಿಂದು ದೇಗುಲಗಳನ್ನು ತೆರವುಗೊಳಿಸಿ, ದರ್ಗಾ ಮಾತ್ರ ಕೈಬಿಟ್ಟಿರುವುದು ಸರಿಯಲ್ಲ. ಇದರಲ್ಲಿ ಸ್ಥಳೀಯ ರಾಜಕಾರಣಿಗಳದ್ದೂ ತಪ್ಪಿದೆ. ಈ ಕುರಿತು ಕೂಡಲೇ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಮುತಾಲಿಕ ಹೇಳಿದರು.