ಜಿಲ್ಲೆ

ಬೊಮ್ಮಾಯಿ ಬೆಂಬಲಿಸಿ, ಋಣ ತೀರಿಸಿ; ಮಾದಿಗ ಸಮಾಜಕ್ಕೆ ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಮನವಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದಾಶಿವ ಆಯೋಗದ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಪರಿಶಿಷ್ಟರಿಗೆ ಅನ್ಯಾಯವಾಗದ ರೀತಿಯಲ್ಲಿ ಅವರವರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದ್ದಾರೆ. ಈ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುವ ಮೂಲಕ ಮಾದಿಗ ಸಮಾಜವು ಅವರ ಋಣ ತಿರಿಸಬೇಕು ಎಂದು ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಮನವಿ ಮಾಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಸಮಾಜಕ್ಕೆ ಒಳಮೀಸಲಾತಿ ನೀಡಲು ಕಳೆದ 30 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಎಲ್ಲ ಸರ್ಕಾರಗಳು ವರದಿ ಜಾರಿಗೆ ತರಲು ವಿಳಂಬ ಮಾಡಿದವು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ನಿರ್ಣಯಿಸಿ ಮಾದಿಗರಿಗೆ ಶೇ.6ರಷ್ಟು ಮೀಸಲಾತಿ ಜಾರಿಗೆ ಬರಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ ಎಂದರು.
ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ 81.21 ಎಕರೆ ಸರ್ಕಾರಿ ಜಮೀನು ನೀಡಿದ್ದಾರೆ. 24 ಸಾವಿರ ಪೌರ ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಸೇವೆ ಸಲ್ಲಿಸಲು ಆದೇಶಿಸಿದ್ದಾರೆ. ಚಲವಾದಿ ಬಲಗೈ ಸಮುದಾಯಕ್ಕೆ ಶೇ.5.50, ಕೊರಚ, ಕೊರಮ, ಲಂಬಾಣಿ, ಬೋವಿ, ಸಮುದಾಯಗಳಿಗೆ ಶೇ.4.50, ಇತರೆ ಅಸ್ಪ್ರಶ್ಯರಿಗೆ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಿದ್ದಾರೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗದ ರೀತಿಯಲ್ಲಿ ಸಮಾಜಿಕ ನ್ಯಾಯ ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿ, ಗದಗ ಜಿಲ್ಲೆಯ ಮಾದಿಗ ಸಮಾಜದ ಬಾಂಧವರು ಬೆಂಬಲಿಸಿ ಮತ ನೀಡುವ ಮೂಲಕ ಅವರ ಋಣ ತಿರಿಸಬೇಕು. ಮಾದಿಗರ ಮತ ಕೇಳುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪರಮೇಶ್ವರಪ್ಪ ಮೇಗಳಮನಿ, ರಾಜು ಮಾದರ, ಮಲ್ಲೇಶಪ್ಪ ಕಡಕೋಳ, ಮಾರುತಿ ಸೊಟ್ಟಪ್ಪನವರ, ರಘು ಮಾಳಗಿ, ಇತರರು ಇದ್ದರು.