ಜಿಲ್ಲೆ

ಬರ ನಿರ್ವಹಣೆಗೆ ಜಿಲ್ಲಾಡಳಿತ ಸಿದ್ಧತೆ; ಬೆಳೆಹಾನಿ ಸಮೀಕ್ಷೆಯ ನಿಖರ ವರದಿ ನೀಡಿ; ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ

ಹಾವೇರಿ: ಜಿಲ್ಲೆಯ ಐದು ತಾಲೂಕುಗಳಲ್ಲಿ ಬರ ಘೋಷಣೆ ಬೆನ್ನಲ್ಲೇ ಬರ ನಿರ್ವಹಣೆಗಾಗಿ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಉಂಟಾಗಿರುವ ಬೆಳೆಹಾನಿ ಸಮೀಕ್ಷೆಯನ್ನು ಗ್ರಾಮವಾರು ನಡೆಸಿ, ಐದು ದಿನದೊಳಗಾಗಿ ನಿಖರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬರ ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆಯ ಕೊರತೆಯಿಂದ ಕೃಷಿ ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳು ನಷ್ಟವಾಗಿರುವ ಕುರಿತಂತೆ ಗ್ರಾಮವಾರು, ಸರ್ವೇ ನಂಬರವಾರು ಮಾಹಿತಿ ಸಂಗ್ರಹಿಸಬೇಕು. ಹೋಬಳಿ, ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಬೆಳೆವಾರು, ಹೆಕ್ಟೇರ್‌ವಾರು ಬೆಳೆ ನಷ್ಟದ ಮಾಹಿತಿ ಹಾಗೂ ನಷ್ಟದ ಮೊತ್ತದ ಅಂದಾಜನ್ನು ಕ್ರೋಢಿಕರಿಸಿ ಸಲ್ಲಿಸುವಂತೆ ಸೂಚಿಸಿದರು.
ಬೆಳೆಹಾನಿ ಸಮೀಕ್ಷೆಗೆ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಯಂತೆ ಬೆಳೆ ನಷ್ಟದ ಮಾಹಿತಿಯ ಬೆಳೆ ಮಾದರಿಯನ್ನು ಸಂಗ್ರಹಿಸಿ, ನಿಗದಿತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಬೆಳೆ ಹಸಿರಾಗಿದ್ದರೂ ಕಾಳುಕಟ್ಟಲು ವಿಫಲವಾದ ಬೆಳೆಗಳನ್ನು ಪರಿಗಣಿಸಬೇಕು. ಪ್ರತಿ ಸರ್ವೇ ನಂಬರವಾರು, ಗ್ರಾಮವಾರು ಬೆಳೆಯ ಹಾನಿಯ ಫೋಟೋ ಮತ್ತು ವಿಡಿಯೋ ದಾಖಲೀಕರಣ ಮಾಡುವುದು ಕಡ್ಡಾಯ. ಬೆಳೆಹಾನಿ ನಷ್ಟ ಸಮೀಕ್ಷೆಯಲ್ಲಿ ನಿಖರತೆ ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ಬೆಳೆ ಹಾನಿ ಸಮೀಕ್ಷೆ ಮಾನೀಟರ್ ಮಾಡಬೇಕು. ಜಾನುವಾರುಗಳಿಗೆ ಮುಂದಿನ ಆರು ತಿಂಗಳವರೆಗೆ ಮೇವಿನ ಕೊರತೆ ಇಲ್ಲ ಎಂದು ತಾವು ಹೇಳಿದರೂ ಮತ್ತೊಮ್ಮೆ ಗ್ರೌಂಡ್ ರಿಯಾಲಿಟಿ ಚೆಕ್ ಮಾಡಿ ಎಂದು ಪಶು ಸಂಗೋಪನಾ ಇಲಾಖೆ ಉಪನಿದೇಶಕರಿಗೆ ಸೂಚಿಸಿದರು. ಜಿಲ್ಲೆಯ ತಹಶೀಲ್ದಾರ್ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಶೌಚಗೃಹಗಳ ಸ್ವಚ್ಛತಾ ನಿರ್ವಹಣೆಗೆ ಕ್ರಮ ವಹಿಸಬೇಕು. ವಿದ್ಯುತ್ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಹಾವೇರಿ ಉಪ ವಿಭಾಗಾಧಿಕಾರಿ ಚನ್ನಪ್ಪ, ಸವಣೂರ ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಉಪ ನಿರ್ದೇಶಕ ಪ್ರದೀಪ, ರೇಷ್ಮೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಹಾವೇರಿ ತಹಶೀಲ್ದಾರ್ ಶಂಕರ ಜಿ.ಎಸ್. ಸೇರಿ ವಿವಿಧ ತಾಲೂಕುಗಳ ತಹಶೀಲ್ದಾರ್, ಮತ್ತಿತರರು ಉಪಸ್ಥಿತರಿದ್ದರು.
ಕುಡಿಯುವ ನೀರಿನ ಸಮೀಕ್ಷೆ
ಮಳೆ ಕೊರತೆಯಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಕೊಳವೆಬಾವಿಗಳನ್ನು ಎರಡು ದಿನಗಳಲ್ಲ್ಲಿ ವಾರ್ಡ್‌ವಾರು ಸಮೀಕ್ಷೆ ಮಾಡಿ, ಜಿಯೋ ಟ್ಯಾಗ್ ಅಳವಡಿಸಬೇಕು. ನಿರುಪಯುಕ್ತ ಕೊಳವೆಬಾವಿಗಳನ್ನು ದುರಸ್ತಿಪಡಿಸಬೇಕು. ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಡಿಸಿ ಸೂಚಿಸಿದರು.
ನರೇಗಾದಡಿ ಉದ್ಯೋಗ ಸೃಷ್ಟಿ
ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿಯಡಿ ಕುಟುಂಬಕ್ಕೆ 100 ದಿನಗಳ ಬದಲು 150 ದಿನಗಳ ಉದ್ಯೋಗ ಹೆಚ್ಚಿಸಲಾಗುವುದು. ವೈಯಕ್ತಿಕ ಕಾಮಗಾರಿಗಳನ್ನು ಹೆಚ್ಚಳ ಮಾಡಲಾಗುವುದು. ಬೆಳೆಹಾನಿ ರೈತರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಿ, ಅವರ ಹೊಲಗಳಲ್ಲಿ ಬದು ನಿರ್ಮಾಣ, ಬಂಡ್ಸ್ ನಿರ್ಮಾಣ, ಕೆರೆ ಹೂಳೆತ್ತುವುದು, ಗೋಮಾಳದಲ್ಲಿ ಗಿಡ ನೆಡುವ ಮತ್ತಿತರ ಕಾರ್ಯಕ್ರಮಗಳ ಮೂಲಕ ಉದ್ಯೋಗ ನೀಡಲು ತಾಲೂಕುವಾರು ವಿಶೇಷ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ಮಾಹಿತಿ ನೀಡಿದರು.
ಡೆಂಘಿ ನಿಯಂತ್ರಣ
ಜಿಲ್ಲೆಯಲ್ಲಿ ಡೆಂಘಿ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ನಗರ ಪ್ರದೇಶಗಳಲ್ಲಿ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಚರಂಡಿ, ಗಟಾರಗಳಲ್ಲಿ ನೀರು ನಿಲ್ಲದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳು ಹಾಗೂ ಪಿಡಿಒಗಳು ಕ್ರಮ ವಹಿಸಬೇಕು ಎಂದು ಡಿಸಿ ಸೂಚನೆ ನೀಡಿದರು.
ಹಾವೇರಿ ಪೌರಾಯುಕ್ತರ ಮೇಲೆ ಗರಂ
ಹಾವೇರಿ ನಗರದ ಸ್ವಚ್ಛತೆ ಬಗ್ಗೆ ತ್ವರಿತ ಕ್ರಮ ಕೈಗೊಳ್ಳದ ಪೌರಾಯುಕ್ತ ಪರಶುರಾಮ ಚಲವಾದಿ ಮೇಲೆ ಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರದೊಳಗೆ ಹಾವೇರಿ ನಗರದ ಎಲ್ಲ ಚರಂಡಿಗಳು ಸ್ವಚ್ಛಗೊಳಿಸದಿದ್ದರೆ ಇಲ್ಲಿಂದ ನಿಮ್ಮನ್ನು ಬೇರೆಡೆ ಕಳುಹಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಸಿದರು. ತಾತ್ಕಾಲಿಕವಾಗಿ ಹೊರಗುತ್ತಿಗೆ ಸೇವೆ ಪಡೆದು ನಗರದ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲು ತಾಕೀತು ಮಾಡಿದರು. ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳಿಗೆ ಸ್ವಚ್ಛತೆಯ ಮೇಲುಸ್ತುವಾರಿ ವಹಿಸಲು ಡಿಸಿ ಸೂಚನೆ ನೀಡಿದರು.
ಕೇಂದ್ರ ತಂಡ ಬರಲಿದೆ
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮಾಹಿತಿ ಸಲ್ಲಿಸುವ ನಿಟ್ಟಿನಲ್ಲಿ ಜಿಲ್ಲೆಯ ಬೆಳೆ ಹಾನಿ ನಷ್ಟದ ಸಮೀಕ್ಷೆ ನಡೆಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ರಾಜ್ಯದಿಂದ ಕೇಂದ್ರಕ್ಕೆ ವರದಿ ಸಲ್ಲಿಕೆಯಾದ ನಂತರ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಲಿದೆ ಎಂದು ಡಿಸಿ ಹೇಳಿದರು.