ಹಾವೇರಿ: ಸಾಮಾಜಿಕ ಪರಿವರ್ತನೆ ಮತ್ತು ಶೈಕ್ಷಣಿಕ ಕ್ಷೇತ್ರದ ಅಭ್ಯುದಯದಲ್ಲಿ ನಿರಂತರ ಬದಲಾವಣೆ ಮತ್ತು ಬೆಳವಣಿಗೆ ಕಾರ್ಯದಲ್ಲಿ ತೊಡಗಿರುವ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಕಾರ್ಯ ಅಚ್ಚಳಿಯದ ಸಾಧನೆಯಾಗಿದೆ ಎಂದು ರೋಟರಿ ಕ್ಲಬ್‌ನ ಕಾರ್ಯದರ್ಶಿ ಪ್ರೊ.ಎಸ್.ಸಿ ಹಿರೇಮಠ ಅಭಿಪ್ರಾಯಪಟ್ಟರು. ನಗರದ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಪ್ರಭಾಕರ ಕೋರೆಯವರ 76ನೇ ವರ್ಷದ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ಭಾಗದ ಜನರ ಆಶಯಗಳಿಗೆ ಪೂರಕವಾಗಿ ಸಪ್ತರ್ಷಿಗಳು ಮಾಡಿದ ಮಹತ್ತರ ಯೋಜನೆಯನ್ನು ಡಾ.ಕೋರೆ ಸಾಕಾರಗೊಳಿಸಿದರು. ಕಲೆ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ರಾಜಕೀಯ ಮೊದಲಾದ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಒಬ್ಬ ವ್ಯಕ್ತಿ ಏನೆಲ್ಲವನ್ನೂ ಮಾಡಬಹುದು ಎಂಬುದಕ್ಕೆ ಸಾಕ್ಷಿ ಕೋರೆಯವರೇ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಖೆಯ ಅಧ್ಯಕ್ಷ ಬಸವರಾಜ ಮಾಸೂರ ಮಾತನಾಡಿ, ಸಮಾಜ ಚಿಂತನೆಯ ಮೂಲಕವೇ ಎಲ್ಲರ ಮನಸ್ಸಿನಲ್ಲಿ ಸದಾ ಉಳಿದಿರುವ ಡಾ.ಪ್ರಭಾಕರ ಕೋರೆಯವರ ಸಾಧನೆ ಇಂದಿನ ಯುವಕರಿಗೆ ಸ್ಪೂರ್ತಿದಾಯಕವಾಗಿದೆ ಎಂದರು. ಶಾಖೆಯ ನಿರ್ದೇಶಕರಾದ ಶಿವಯೋಗಿ ಕೊಳ್ಳಿ, ಎಸ್.ಎಂ ಹುರಳಿಕೊಪ್ಪಿ, ದಯಾನಂದ ಯಡ್ರಾಮಿ, ಕಾನೂನು ಸಲಹೆಗಾರ ಕೆ.ಸಿ ಪಾವಲಿ, ವ್ಯವಸ್ಥಾಪಕ ಬಿ.ಡಿ ಪಾಟೀಲ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕೆ.ಎಲ್.ಇ. ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಖಾ ನಿರ್ದೇಶಕ ನಿರಂಜನ ಹೆರೂರ ಸ್ವಾಗತಿಸಿದರು. ಜಿಎಚ್ ಕಾಲೇಜಿನ ಪ್ರಾಧ್ಯಾಪಕ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ನಿರ್ದೇಶಕ ವಿನಯ ಶಿರೂರ ವಂದಿಸಿದರು.
ಬಹುಮಾನ ವಿತರಣೆ
ಡಾ.ಕೋರೆ ಅವರ ಜನ್ಮದಿನದ ಅಂಗವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿ ಕುಂದೂರ ಪ್ರಥಮ, ತೇಜಸ್ವಿನಿ ಬಂಕಾಪೂರ ದ್ವಿತೀಯ, ಯಾಸ್ಮಿನ್ ದೊಡ್ಡಮನಿ ತೃತೀಯ ಸ್ಥಾನ ಪಡೆದರು ಮೂವರಿಗೂ ನಗದು ಬಹುಮಾನ, ಪದಕ ವಿತರಿಸಲಾಯಿತು.