ಹಾವೇರಿ: ಸಮಾಜದಲ್ಲಿರುವ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕುವಂತೆ ಮನವಿ ಮಾಡುವ ಮೂಲಕ ವ್ಯಸನ ಮುಕ್ತ ಸಮಾಜದ ಕನಸುಕಂಡವರು ಇಳಕಲ್ ಮಹಾಂತ ಶ್ರೀಗಳು ಎಂದು ಮನೋವೈದ್ಯ ಡಾ.ವಿಜಯಕುಮಾರ ಬಳಿಗಾರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಅಕ್ಕಿ-ಬೇಳೆ, ದವಸ ಧಾನ್ಯಗಳನ್ನು ಜೋಳಿಗೆಗೆ ಹಾಕಿ ಎಂದು ಕೇಳುವ ಇತರ ಸ್ವಾಮೀಜಿಗಳಿಗಿಂತ ಭಿನ್ನವಾದ ನಡೆಯಿಂದ ಧಾರ್ಮಿಕ, ಅಧ್ಯಾತ್ಮಿಕ ಶ್ರೇಯಸ್ಸಿನೊಂದಿಗೆ ಸ್ವಚ್ಛ ಸಮಾಜದ ಏಳ್ಗೆಗಾಗಿ ಯುವ ಜನರಲ್ಲಿರುವ ದುಶ್ಚಟಗಳನ್ನು ಕೈಬಿಡುವಂತೆ ಜಾಗೃತಿ ಮೂಡಿಸಿ, ಜೋಳಿಗೆಯಲ್ಲಿ ದುಶ್ಚಟಗಳನ್ನು ದಾನ ಮಾಡಿ ಎಂದು ಮಹಾಂತ ಜೋಳಿಗೆ ಹಿಡಿದು ಸಮಾಜಿಕ ಆಂದೋಲನದ ರೀತಿಯಲ್ಲಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸವಿತಾ, ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ಸೇವನೆ ನನಗೆ ಮತ್ತು ಮಾನವ ಸಮಾಜಕ್ಕೆ ಮಾರಕವೆಂದು ಪ್ರತಿಯೊಬ್ಬರೂ ಅರಿಯಬೇಕು. ಇದರಿಂದ ಮಾನವನ ದೇಹವಲ್ಲದೇ ಮನಸ್ಸು ಮತ್ತು ಸ್ವಾಸ್ಥ್ಯ ಸಮಾಜ ಅನಾರೋಗ್ಯಪೀಡಿತವಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನತೆ ಇದರ ದಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಮಾನವ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶಿದ್ದಲಿಂಗೇಶ ರಂಗಪ್ಪನವರ, ಡಿಡಿಪಿಯು ಡಾ.ಎಚ್.ಉಮೇಶಪ್ಪ, ಜಿಲ್ಲಾ ವಾರ್ತಾಧಿಕಾರಿ ರಂಗನಾಥ, ರೇಷ್ಮಾ ಕೌಸರ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.