ಹಾವೇರಿ: ಮಳೆಯ ಅಭಾವ ಉಂಟಾಗಿರುವ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಿಕೊಳ್ಳಿ, ಜನ, ಜಾನುವಾರುಗಳಿಗೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ವಿತ್ತೀಯ ಸುಧಾರಣೆ, ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಪಂ ಆಡಳಿತಾಧಿಕಾರಿ ಡಾ.ವಿಶಾಲ ಆರ್. ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಪ್ರಸಕ್ತ ಸಾಲಿನ ವಿವಿಧ ಯೋಜನೆಗಳ ಅನುಮೋದನೆ ಹಾಗೂ ಅನುಷ್ಠಾನ ಕುರಿತಂತೆ ಮಾಹಿತಿ ಪಡೆದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಉದ್ಯೋಗ ಖಾತ್ರಿಯಡಿ ಉದ್ಯೋಗಾವಕಾಶಗಳು, ಪಡಿತರ ವ್ಯವಸ್ಥೆ, ಆರೋಗ್ಯ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ನೀರಾವರಿ ಸೌಕರ್ಯ ಹಾಗೂ ಕೊಳವೆಬಾವಿ ಹೊಂದಿದ ರೈತರನ್ನು ಗುರುತಿಸಿ, ಮೇವಿನ ಬೀಜದ ಕಿಟ್ ವಿತರಿಸಿ, ಜಾನುವಾರುಗಳಿಗೆ ಮೇವು ಬೆಳೆಯಲು ಕ್ರಮ ಕೈಗೊಳ್ಳುವಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅನ್ನಭಾಗ್ಯ ಯೋಜನೆಯಡಿ ಪಡಿತರ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ, ಉದ್ಯೋಗ ಖಾತ್ರಿಯಡಿ ಕೆಲಸ ನೀಡಿ, ಉದ್ಯೋಗ ಅರಸಿ ಬೇರೆಡೆ ತೆರಳದಂತೆ ಕ್ರಮವಹಿಸಿ. ಕುಟುಂಬದ ಹಿರಿಯ ಸದಸ್ಯರು ಹಾಗೂ ಮಕ್ಕಳಿಗೆ ಅಂಗನವಾಡಿ ಮತ್ತು ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರಕುವಂತಾಬೇಕು ಎಂದು ಸಲಹೆ ನೀಡಿದರು.
ಪ್ರತಿ ತಿಂಗಳು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಸಮಿತಿ ಸಭೆ ನಡೆಸಬೇಕು. ರಸ್ತೆ, ನಿವೇಶನ ರಚನೆ, ಮನೆ ನಿರ್ಮಾಣದಂತಹ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮನೆ ಮತ್ತು ನಿವೇಶನ ಹೊಂದುವ ಜನರಿಗೆ ಅನುಕೂಲವಾಗಲಿದೆ. ಕಂದಾಯ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ತ್ವರಿತವಾಗಿ ವಿಲೇವಾರಿಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ತಕ್ಷಣ ಪರಿಹಾರ ನೀಡಿ
ಮಳೆಯ ಅಭಾವದಿಂದ ಬೆಳೆಗಳ ಸ್ಥಿತಿಗತಿಗಳ ಕುರಿತಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಬೆಳೆಹಾನಿ ಗ್ರೌಂಡ್ ಟ್ರೂಥ್ ರಿಪೋರ್ಟ್ ತ್ವರಿತವಾಗಿ ಸರ್ಕಾರಕ್ಕೆ ಸಲ್ಲಿಸಿ. ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪರಿಹಾರ ತ್ವರಿತವಾಗಿ ಸಂದಾಯ ಮಾಡಿ. ಎಲ್ಲ ಮನೆಗಳ ಸರ್ವೇ ಪೂರ್ಣಗೊಂಡ ನಂತರ ಪರಿಹಾರ ಪಾವತಿಸುವ ಬದಲು ಸರ್ವೇ ಮುಗಿಸಿ ಪರಿಹಾರಕ್ಕೆ ಅರ್ಹ ಇರುವ ಮನೆಗಳಿಗೆ ತಕ್ಷಣವೇ ಪರಿಹಾರ ಬಿಡುಗಡೆಗೊಳಿಸಿ ಎಂದು ವಿಶಾಲ ಸಲಹೆ ನೀಡಿದರು.
ಮೃತಪಟ್ಟವರ ಹೆಸರು ಕೈಬಿಡಿ
ಜನನ-ಮರಣ ದಾಖಲಾತಿಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ, ಕಳೆದ ಎಂಟು ವರ್ಷಗಳಿಂದ ಮರಣ ಹೊಂದಿದವರು ಫಲಾನುಭವಿಗಳ ಪಟ್ಟಿಯಲ್ಲಿ ಮುಂದುವರೆದಿದ್ದಾರೆ. ಮರಣ ಹೊಂದಿದ ವ್ಯಕ್ತಿಗಳು ವಿವಿಧ ಯೋಜನೆಯ ಫಲಾನುಭವಿಗಳ ಸಕ್ರಿಯ ಪಟ್ಟಿಯಲ್ಲಿ ಇದ್ದರೆ ತೆಗೆದುಹಾಕಿ ಎಂದು ತಹಶೀಲ್ದಾರ್‌ಗಳಿಗೆ ವಿಶಾಲ ಸೂಚಿಸಿದರು.
ಆಸ್ಪತ್ರೆ ಹೊಣೆ ಎಸಿಗೆ
ಪ್ರತಿ ತಿಂಗಳು ಉಪ ವಿಭಾಗಾಧಿಕಾರಿಗಳು ತಾಲೂಕು ಮಟ್ಟದ ಆರೋಗ್ಯ ಸುರಕ್ಷಾ ಸಮಿತಿಗಳ ಸಭೆಗಳನ್ನು ನಡೆಸಬೇಕು. ತಾಲೂಕು ಆಸ್ಪತ್ರೆಗಳ ಕುಂದುಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ, ಕೊರತೆಗಳನ್ನು ನಿವಾರಿಸಲು ಕ್ರಮತೆಗೆದುಕೊಳ್ಳಬೇಕು ಎಂದು ವಿಶಾಲ ಆರ್. ಸೂಚಿಸಿದರು.
ಕಾಮಗಾರಿ ವಿಳಂಬಕ್ಕೆ ಅಸಮಧಾನ
ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದಲ್ಲಿ ವಿವಿಧ 125 ಕಾಮಗಾರಿಗಳಿಗೆ ಅನುಮೋದನೆ ನೀಡಿ 40 ದಿನಗಳು ಕಳೆದರೂ ಟೆಂಡರ್ ಪ್ರಕ್ರಿಯೆ ಕೈಗೊಳ್ಳದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಶಾಲ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಮುಂದಿನ ಬುಧವಾರದೊಳಗಾಗಿ ಎಲ್ಲ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ವಿಳಂಬ ಮಾಡಿದರೆ ಸರ್ಕಾರಕ್ಕೆ ಶಿಸ್ತು ಕ್ರಮಕ್ಕೆ ಬರೆಯಲಾಗುವುದು ಎಂದು ಎಚ್ಚರಿಸಿದರು.