ಜಿಲ್ಲೆ

ಹಾವೇರಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುವ ಭರವಸೆ

ಗುತ್ತಲ: ಹಾವೇರಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಅದರಲ್ಲೂ ರುದ್ರಪ್ಪ ಲಮಾಣಿ ಅವರಿಗೆ ಮಂತ್ರಿ ಸ್ಥಾನ ಸಿಗುವುದೆಂದು ಭಾವಿಸಿದ್ದೆ, ಮುಂದಿನ ದಿನಗಳಲ್ಲಿ ರುದ್ರಪ್ಪ ಲಮಾಣಿ ಮಂತ್ರಿಯಾಗುವ ಭರವಸೆ ಇದೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನೆಗಳೂರ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ವಿುಸಲಾದ ರಾಜೀವ ಸೇವಾ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಪಾಲರ ನಂತರದ ದೊಡ್ಡ ಹುದ್ದೆಯಾಗಿರುವ ಸಭಾಪತಿ ಸ್ಥಾನ ದೊರಕಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ರುದ್ರಪ್ಪ ಲಮಾಣಿ ಮಾತನಾಡಿ, ನೆಗಳೂರ ಗ್ರಾಮದ ಜನತೆ ನನಗೆ ಹೆಚ್ಚು ಬೆಂಬಲ ನೀಡಿದ್ದಾರೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಗುತ್ತಲ ಹೋಬಳಿಯಲ್ಲಿ ಬೇಸಿಗೆಯಲ್ಲಿ ಹೆಚ್ಚು ಅಗ್ನಿ ಅನಾಹುತಗಳು ಸಂಭವಿಸುತ್ತಿವೆ. ಈ ಕಾರಣಕ್ಕಾಗಿ ಅಗ್ನಿಶಾಮಕ ಠಾಣೆ ಮಂಜೂರಿ ಮಾಡಿಸಿದ್ದೆ. ಆದರೆ, ಕೊನೆ ಘಳಿಗೆಯಲ್ಲಿ ನನೆಗುದಿಗೆ ಬಿದ್ದಿತ್ತು. ಈಗ ಅಗ್ನಿಶಾಮಕ ಠಾಣೆಯನ್ನು ಮಂಜೂರಿ ಮಾಡಿಸಿ ಕಾರ್ಯಾರಂಭ ಮಾಡಿಸುತ್ತೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ನೆಗಳೂರ ಸಂಸ್ಥಾನ ಹಿರೇಮಠ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರುದ್ರಪ್ಪ ಲಮಾಣಿ ಅವರು ಜನಪರ ಕಾಳಜಿಯುಳ್ಳವರಾಗಿದ್ದು, ಅವರಿಂದ ತಾಲೂಕಿನ ಸಮಗ್ರ ಅಭಿವೃದ್ಧಿಯಾಗುವ ಭರವಸೆ ಇದೆ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ ಪ್ರಸ್ತಾವಿಕವಾಗಿ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಸಿಡಿಪಿಒ ಶೈಲಜಾ ಕುರಹಟ್ಟಿ, ಗ್ರಾಪಂ ಅಧ್ಯಕ್ಷ ಬಸನಗೌಡ ಸುಕಳಿ, ತಾಪಂ ಮಾಜಿ ಅಧ್ಯಕ್ಷ ನಾಗರಾಜ ಎರಿಮನಿ, ಸಿದ್ದಪ್ಪ ಬಾಲಮ್ಮನವರ, ಈರಪ್ಪ ಲಮಾಣಿ, ಬಸಣ್ಣ ಕಂಬಳಿ, ಮಂಜುರೆಡ್ಡಿ ಮಾಗಡಿ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಎಂ.ಎಂ. ಬಣಕಾರ ಇತರರಿದ್ದರು.

ಹೆಣ್ಣು ಮಕ್ಕಳ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಭರಮಣ್ಣ ದೊಡ್ಡವೀರಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಎಪಿಎಂಸಿ ಮಾಜಿ ನಿರ್ದೇಶಕ ಕೆ.ಎಂ. ಮೈದೂರ ಸ್ವಾಗತಿಸಿದರು.