ಹಾವೇರಿ: ಮಳೆ ಕೊರತೆ, ಬರದ ಛಾಯೆ, ಬೆಲೆ ಏರಿಕೆಯ ನಡುವೆಯೂ ಹಿಂದುಗಳ ಸಾಂಪ್ರದಾಯಿಕ ಹಬ್ಬ ವಿಘ್ನ ನಿವಾರಕ ಗಣೇಶೋತ್ಸವ ಹಬ್ಬದ ಸಡಗರ ಜಿಲ್ಲೆಯಾದ್ಯಂತೆ ಮನೆ ಮಾಡಿದೆ. ಮನೆ, ಮಂದಿರ, ಬೀದಿ- ಬೀದಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ ಭಕ್ತರು ‘ಗಣಪತಿ ಬಪ್ಪಾ ಮೋರಯಾ..’ ಎಂದು ಉದ್ಘಾರ ಹಾಕುತ್ತಿದ್ದಾರೆ.
ಜಿಲ್ಲೆಯ ಹಲವೆಡೆ ಸೋಮವಾರವೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರೆ, ಕೆಲವೆಡೆ ಮಂಗಳವಾರ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಬೆಳಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಮಕ್ಕಳು, ಮಹಿಳೆಯರು ಸೇರಿದಂತೆ ಮನೆ ಮಂದಿಯಲ್ಲ ಸೇರಿ ಗಣೇಶ ಮೂರ್ತಿಯನ್ನು ಶ್ರದ್ಧಾ, ಭಕ್ತಿಪೂರ್ವಕವಾಗಿ ಮನೆಗೆ ಕರೆತಂದು ಪ್ರತಿಷ್ಠಾಪಿಸಿದರು.
ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸಿದರು. ಗೃಹಿಣಿಯರು ಗಣಪನಿಗೆ ಪ್ರಿಯವಾದ ಮೋದಕ, ಲಡ್ಡು, ಚಕ್ಕುಲಿ, ಹೋಳಿಗೆ, ಕಡುಬು, ಪಾಯಸ, ಮತ್ತಿತರ ಭಕ್ಷೃಗಳನ್ನು ಸಿದ್ಧಪಡಿಸಿ ನೈವೇದ್ಯ ಮಾಡಿ, ಕುಟುಂಬಸಮೇತರಾಗಿ ಸೇವಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಗಜಾನನ ಉತ್ಸವ ಸಮಿತಿ ಪದಾಧಿಕಾರಿಗಳು 5, 10, 15, 20 ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಭರ್ಜರಿ ಮೆರವಣಿಗೆಯೊಂದಿಗೆ ಕರೆತಂದರು. ಭಾಜ- ಭಜಂತ್ರಿ, ಡೊಳ್ಳು, ಸಮಾಳ, ಮತ್ತಿತರ ವಾದ್ಯಗಳೊಂದಿಗೆ ಕುಣಿಯುತ್ತ ಗಜಮುಖನನ್ನು ಸ್ವಾಗತಿಸಿ ಪುನೀತರಾದರು.
ಬಗೆ ಬಗೆಯ ಗಣಪ
ಹಾವೇರಿ ನಗರದ ಸುಭಾಷ ವೃತ್ತದಲ್ಲಿ ಬೃಹತ್ ಗಾತ್ರದ ಹಾವೇರಿ ಕಾ ರಾಜಾ, ಕಾಗಿನೆಲೆ ರಸ್ತೆಯ ಹಿಂದು ಮಹಾಸಭಾದ ಆಂಜನೇಯ ಸ್ವರೂಪಿ ಗಣೇಶ, ಪುರದ ಓಣಿಯಲ್ಲಿ ಚಂದ್ರಯಾನ- 2 ಗಣಪ, ಅಶ್ವಿನಿ ನಗರದ ಸಾಯಿಬಾಬಾ ಗಣಪ, ಅಂಬೇಡ್ಕರ್ ವೃತ್ತದ ಸಿಂಹಾರೂಢ ಗಣೇಶ, ಬಣ್ಣದ ಮಠ ಓಣಿ ಸಿಂಹಾಸನಾರೂಢ ಗಣೇಶ, ಸೇರಿದಂತೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಗೆ ಬಗೆಯ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.