ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಸವಾತಂತ್ರೊೃೀತ್ಸವದ ಝೇಂಕಾರ ಮೊಳಗಿತು. ಶಾಲಾ- ಕಾಲೇಜುಗಳ ಮಕ್ಕಳು ಸೇರಿದಂತೆ ಹಿರಿಯರು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಪಟ್ಟರು. ಪೊಲೀಸ್, ಎನ್‌ಸಿಸಿ, ಶಾಲಾ ಮಕ್ಕಳ ಶಿಸ್ತುಬದ್ಧ ಪಥಸಂಚಲನ ಎಲ್ಲರ ಗಮನ ಸೆಳೆಯಿತು.
ಮೊದಲಿಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು. ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಲಾಯಿತು.
ಸಶಸ್ತ್ರಮೀಸಲು ಪಡೆ, ನಾಗರಿಕ ಪೊಲೀಸ್, ಅಬಕಾರಿ, ಅರಣ್ಯ, ಗೃಹರಕ್ಷಕದಳ, ಎನ್.ಸಿ.ಸಿ., ಸ್ಕೌಟ್ ಆಂಡ್ ಗೌಡ್ಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಚಿವರು ಅಲಂಕೃತ ತೆರೆದ ವಾಹನದಲ್ಲಿ ಆಗಮಿಸಿ ಗೌರವ ವಂದನೆ ಸ್ವೀಕರಿಸಿದರು. ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ಜಿಲ್ಲಾಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಕರ್ಷಕ ನೃತ್ಯಗಳು: ನಗರದ ಕೆ.ಎಲ್.ಇ., ಸರ್.ಎಂ.ವಿಶ್ವೇಶ್ವರಯ್ಯ, ನವಚೇತನ, ಹುಕ್ಕೇರಿಮಠ ಹಾಗೂ ಲಯನ್ಸ್ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ದೇಶಭಕ್ತಿಗೀತೆಗಳ ನೃತ್ಯ ಪ್ರದರ್ಶನಗಳು ನೆರೆದಿದ್ದವರಲ್ಲಿ ದೇಶಭಕ್ತಿ ಮೂಡಿಸಿದವು.
ಬಹುಮಾನ ವಿತರಣೆ: ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊನೆಯತನಕ ಕುಳಿತು ವಿಕ್ಷೀಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು, ಪ್ರತಿ ನೃತ್ಯ ಕಾರ್ಯಕ್ರಮದ ನಂತರ ಬಹುಮಾನ ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಪಥಸಂಚಲನದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿಸಿದ ತಂಡಗಳಿಗೆ ಬಹುಮಾನ ವಿತರಿಸಿದರು.
ಲ್ಯಾಪ್‌ಟಾಪ್ ವಿತರಣೆ:
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದ ಆರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಮರಣಾ ನಂತರ ದೇಹದಾನ ಮಾಡಿದ ಕುಟುಂದವರಿಗೆ ಪ್ರಸಂಶನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಕೆ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಆನಂದಸ್ವಾಮಿ ಗಡ್ಡದೇವರಮಠ, ಇತರರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಚಿವರು ಸನ್ಮಾನಿಸಿದರು. ಪರಿಸರ ಕ್ಷೇತ್ರದಿಂದ ಪಕ್ಕೀರೇಶ ಸಿದ್ದಪ್ಪ ಹುರಳಿಕುಪ್ಪಿ, ಬಸವರಾಜ ಜಾಡರ, ಸಮಾಜ ಸೇವೆ ಕ್ಷೇತ್ರದಿಂದ ಮಂಜುನಾಥ ಪೂಜಾರ, ಭುವನೇಶ್ವರ ಶಿಡ್ಲಾಪೂರ, ಶಿವಾನಂದ ಹಡಪದ, ಹರೀಶ ಇಂಗಳಗುಂದಿ, ವೈದ್ಯಕೀಯ ಕ್ಷೇತ್ರದಿಂದ ಡಾ.ಉಮಾ ಬಳಿಗಾರ, ಯೋಧರಾದ ಬಸಂತಪ್ಪ ದೊಡ್ಡಮನಿ, ರಾಮಣ್ಣ ಹನುಮಂತಪ್ಪ ಈಳಿಗೇರ, ಕ್ರೀಡಾ ಕ್ಷೇತ್ರದಿಂದ ಚೇತನಕುಮಾರ ಹಟ್ಟಿ, ಕೃಷಿ ಕ್ಷೇತ್ರದಿಂದ ಸಂತೋಷ ಆರೇರ, ಶಿಕ್ಷಣ ಕ್ಷೇತ್ರದಿಂದ ಅಸ್ಪಾನಾಬಾನು ಮಾಣಿಕ, ತೋಟಗಾರಿಕೆ ಕ್ಷೇತ್ರದಿಂದ ಭರಮಲಿಂಗಪ್ಪ ಅಸುಂಡಿ, ಪುಟ್ಟಪ್ಪ ಕಿತ್ತೂರ, ಎನ್.ಸಿ.ಸಿ. ಎ ಗ್ರೇಡ್‌ನಿಂದ ಮೆಹಬೂಬ ನೀರಲಗಿ, ಮಯೂರ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಮಂತ್ರಿಯವರ ಚಿನ್ನದ ಪದಕ ಪಡೆದ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಸಂತೋಷ್ ಪವಾರ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಕನ್ನಡ, ಆಂಗ್ಲ ಹಾಗೂ ಉರ್ದು ಮಾಧ್ಯಮದ ತಲಾ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.