ಜಿಲ್ಲೆ

ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾಗಿ ಮಲ್ಲೇಶ ಕರಿಗಾರ ಆಯ್ಕೆ

ಹಾವೇರಿ: ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕಕರ ಸಂಘದ 2024-29ನೇ ಅವಧಿಯ ಜಿಲ್ಲಾ ಅಧ್ಯಕ್ಷರಾಗಿ ತಾಲೂಕಿನ ಕೂರಗುಂದ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲೇಶ ಕರಿಗಾರ ಆಯ್ಕೆಯಾಗಿದ್ದಾರೆ.

ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಶಾಖೆಯ ಅಧ್ಯಕ್ಷ, ಖಜಾಂಚಿ, ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಕಮಗಾಲ ದಾವಲಸಾಬ ಖಜಾಂಚಿಯಾಗಿ ಹಾಗೂ ಮುನೀಶ್ವರ ಎಚ್. ಚೂರಿ ರಾಜ್ಯ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯಿತು. ನಂತರ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದು, ಅಂತಿಮವಾಗಿ ಮಲ್ಲೇಶ ಕರಿಗಾರ 33 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಕಮಗಾಲ ದಾವಲಸಾಬ 36 ಮತಗಳನ್ನು ಪಡೆದು ಖಜಾಂಚಿ ಸ್ಥಾನಕ್ಕೆ ಆಯ್ಕೆಯಾದರು. ಮುನೀಶ್ವರ ಎಚ್. ಚೂರಿ 33 ಮತಗಳನ್ನು ಪಡೆದು ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆಯಾದರು.

ಸಮನಾದ ಮತ ಪಡೆದ ಇಬ್ಬರು ಅಭ್ಯರ್ಥಿಗಳು

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲೇಶ ಕರಿಗಾರ ಹಾಗೂ ಸಿದ್ದಣ್ಣ ಯಲಿಗಾರ ಇಬ್ಬರೂ ಸಮನಾಗಿ 32 ಮತಗಳನ್ನು ಪಡೆದುಕೊಂಡಿದ್ದರು. ಹಾಗಾಗಿ, ಅಭ್ಯರ್ಥಿಗಳ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಚೀಟಯಲ್ಲಿ ಮಲ್ಲೇಶ ಕರಿಗಾರ ಅವರ ಹೆಸರು ಬಂದ ಕಾರಣ ಅವರನ್ನು ಅಧಿಕೃತವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಎಚ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.