ಜಿಲ್ಲೆ

ಜ್ವರ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಬನ್ನಿ; ಡಿಎಚ್‌ಒ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಸಲಹೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲೆಯಾದ್ಯಂತ ನಗರ ಮತ್ತು ಗ್ರಾಮಿಣ ಪ್ರದೇಶಗಳಲ್ಲಿ ವೈರಲ್ ಜ್ವರ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಜ್ವರ ಕಾಣಿಸಿಕೊಂಡ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿ, ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
ಡೆಂೆ ಮತ್ತು ಚಿಕುನ್‌ಗುನ್ಯ ಜ್ವರ ಈಡಿಸ್ ಎಂಬ ಸೊಂಕು ಹೊಂದಿದ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಈ ರೋಗ ಹರಡುತ್ತವೆ. ಈ ಸೊಳ್ಳೆಗಳು ಸಂಗ್ರಹಿಸಿಟ್ಟಿರುವ ನೀರಿನಲ್ಲಿ ಬೆಳೆಯುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸಾರ್ವಜನಿಕರು ಈ ಕೆಳಗಿನಂತೆ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ಡೆಂೆ ಮತ್ತು ಚಿಕುನ್‌ಗುನ್ಯ ಜ್ವರವನ್ನು ಸಮುದಾಯದಲ್ಲಿ ಹರಡದಂತೆ ನೋಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ನಿಲ್ಲದಂತೆ ಕ್ರಮವಹಿಸಿ:
ಡೆಂೆ ಜ್ವರ ಹರಡುವಿಕೆಗೆ ಕಾರಣವಾದ ಈಡಿಸ್ ಸೊಳ್ಳೆಗಳು ನಿಂತ ನೀರಿನಲ್ಲಿ ಬೆಳೆಯುವುದರಿಂದ ಸಾರ್ವಜನಿಕರು ತಮ್ಮ ಮನೆಗಳಲ್ಲಿ ನೀರನ್ನು ಸಂಗ್ರಹಿಸಿಟ್ಟಿರುವ ಸಿಮೆಂಟ್ ತೊಟ್ಟಿ, ಕಲ್ಲು ಬಾನಿ, ಡ್ರಮ್, ಬ್ಯಾರಲ್ ಇವುಗಳನ್ನು ವಾರದಲ್ಲಿ ಎರಡು ಬಾರಿಯಾದರೂ ಸ್ವಚ್ಛವಾಗಿ ತೊಳೆದು ನೀರನ್ನು ತುಂಬಿ ಮುಚ್ಚಿಡಬೇಕು. ಮನೆಯ ಸುತ್ತಮುತ್ತ ಬಿಸಾಡಿದ ತೆಂಗಿನ ಚಿಪ್ಪುಗಳಲ್ಲಿ, ಟೈರ್‌ಗಳಲ್ಲಿ, ಒಡೆದ ಪ್ಲಾಸ್ಟಿಕ್ ಬಿಂದಿಗೆ, ಡಬ್ಬಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಮನೆ ಕಟ್ಟಡ ಕಾಮಗಾರಿಗಳನ್ನು ಮಾಡುತ್ತಿದ್ದರೆ ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಡಿಎಚ್‌ಒ ತಿಳಿಸಿದ್ದಾರೆ.
ಸೊಳ್ಳೆ ನಿರೋಧಕ ಬಳಸಿ:
ಈಡಿಸ್ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಮಕ್ಕಳು ಮತ್ತು ವಯೋವೃದ್ದರು ಮೈತುಂಬ ಬಟ್ಟೆಯನ್ನು ಧರಿಸಬೇಕು ಹಾಗೂ ನಿದ್ರೆ ಮಾಡುವಾಗ ಸೊಳ್ಳೆ ಪರದೆಗಳ ಒಳಗೆ ಮಲಗಬೇಕು. ಸೊಳ್ಳೆ ಕಚ್ಚುವಿಕೆಯಿಂದ ರಕ್ಷಿಸಿಕೊಳ್ಳಲು ಸ್ವಯಂರಕ್ಷಣಾ ವಿಧಾನಗಳಾದ ಔಷಧ ಅಂಗಡಿಗಳಲ್ಲಿ ಲಭ್ಯವಿರುವ ಸೊಳ್ಳೆ ನಿರೋಧಕಗಳು, ಸೊಳ್ಳೆ ಭತ್ತಿಗಳನ್ನು ಬಳಸಬೇಕು ಎಂದು ಡಿಎಚ್‌ಒ ಸಲಹೆ ನೀಡಿದ್ದಾರೆ.