ಹಾವೇರಿ: ಸತತ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮೂರು ಮನೆಗಳ ಮೇಲ್ಚಾವಣಿ ಕುಸಿದಿವೆ. ಅದೃಷ್ಟವಶಾತ್ ನಿದ್ರೆ ಮಂಪರಿನಲ್ಲಿದ್ದ ಮೂರು ಕುಟುಂಬಗಳ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜಪ್ಪ ದಳವಾಯಿ, ಕೃಷ್ಣಪ್ಪ ಲಮಾಣಿ, ಬಸವರಾಜ ಮಾಳಗಿ ಎಂಬುವವರ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದಿವೆ. ರಾತ್ರಿ ಸದಸ್ಯರೆಲ್ಲ ನಿದ್ರಿಸುತ್ತಿದ್ದಾಗ ಗೋಡೆ, ಮೇಲ್ಚಾವಣಿ ಕುಸಿದಿವೆ. ಈ ವೇಳೆ ಸದಸ್ಯರು ಮನೆಯಿಂದ ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಮನೆಯ ಪೀಠೋಪಕರಣಗಳು, ಶಾಲಾ ಬ್ಯಾಗ್, ಇತರ ಪರಿಕರಗಳು ಸಿಲುಕಿಕೊಂಡಿವೆ. ಇದರಿಂದ ಸಂತ್ರಸ್ತರು ಪರದಾಡುವಂತಾಗಿದೆ. ರೈತಾಪಿ ವರ್ಗದ ನಮ್ಮ ಕುಟುಂಬಕ್ಕೆ ಸರ್ಕಾರ ಸೂಕ್ತ ಸಹಾಯ ಮಾಡಬೇಕು. ಮನೆಯಲ್ಲಿದ್ದ ದವಸ, ಧಾನ್ಯಗಳು ಹಾಳಾಗಿವೆ. 5, 10 ಸಾವಿರ ಪರಿಹಾರ ಕೊಡದೇ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.