ಜಿಲ್ಲೆ

ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಸಹಕಾರಿ; ದೇವಗಿರಿ, ದೇವಿಹೊಸೂರು ಕ್ಲಸ್ಟರ್ ಮಟ್ಟದ ಸಮಾರಂಭದಲ್ಲಿ ಬಿಇಒ ಮೌನೇಶ ಬಡಿಗೇರ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹೇಳಿದರು. ತಾಲೂಕಿನ ದೇವಗಿರಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದೇವಗಿರಿ ಮತ್ತು ದೇವಿಹೊಸೂರು ಕ್ಲಸ್ಟರ್ ವ್ಯಾಪ್ತಿಯ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯವಸ್ತುವಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಅವರಲ್ಲಿನ ವಿವಿಧ ಪ್ರತಿಭೆಗಳನ್ನು ಬೆಳಕಿಗೆ ತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಾರದರ್ಶಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರನ್ನು ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು. ಶಿಕ್ಷಣ ಸಂಯೋಜಕ ಓಂಪ್ರಕಾಶ ಯತ್ತಿನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ಮಂಜನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದೇವಗಿರಿ ಕ್ಲಸ್ಟರ್ ವ್ಯಾಪ್ತಿಯ ಪ್ರೌಢಶಾಲೆಗಳ ಆಯ್ದ ಹಿರಿಯ ಕ್ರಿಯಾಶೀಲ ಶಿಕ್ಷಕರನ್ನು ಸಿಆರ್‌ಪಿ ಶ್ರೀಕಾಂತ ದೊಡ್ಡಕುರುಬರ ಸನ್ಮಾನಿಸಿದರು. ಸಮಾರಂಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಅಶೋಕ ಕಲ್ಲೆದೇವರ, ಗಿರೀಶ ಸಂಧಿಮನಿ, ಗಂಗಾಧರ ಪಾಟೀಲ, ಶಾಂತಮ್ಮ ಪಾಟೀಲ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಮೇಶ ಕಂಬಳಿ, ಶಿಕ್ಷಣ ಸಂಯೋಜಕ ಎಸ್.ಆರ್.ಹಿರೇಮಠ, ಮುಖ್ಯೋಪಾಧ್ಯಾಯ ರಮೇಶ ಎಂ.ಬಿ., ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಕಣವಿ, ಶ್ರೀಕಾಂತ ದೊಡ್ಡಕುರುಬರ, ಮತ್ತಿತರರು ಪಾಲ್ಗೊಂಡಿದ್ದರು. ರಮೇಶ ಎಂ.ಬಿ. ಸ್ವಾಗತಿಸಿದರು. ಎಂ.ಎಸ್.ಪುರದ ನಿರೂಪಿಸಿದರು. ಬಿ.ಎಂ.ಮೆಡ್ಲೇರಿ ವಂದಿಸಿದರು.