ಜಿಲ್ಲೆ

ಹಾವೇರಿಯಲ್ಲಿ ಡೆಂಘೆ ಜಾಗೃತಿ ಜಾಥಾ, ಲಾರ್ವಾ ಸಮೀಕ್ಷೆ

ಹಾವೇರಿ: ಆರೋಗ್ಯ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶಿವಾಜಿನಗರದ ಮಂಜುನಾಥ ಪ್ರೌಢಶಾಲೆಯಲ್ಲಿ ಪ್ರತಿ ಶುಕ್ರವಾರ ಆಚರಿಸುವ ಶುಷ್ಕ ದಿನಾಚರಣೆ ಅಂಗವಾಗಿ ಜಾಥಾ ಜಾಗೃತಿ, ಲಾರ್ವಾ ಸಮೀಕ್ಷೆ ಕಾರ್ಯಕ್ರಮ ಜರುಗಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಜಾಥಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಶಿವಾಜಿ ನಗರ 1, 2, 3ನೇ ಕ್ರಾಸ್, ವಾರ್ಡ್ ಸಂಖ್ಯೆ 8, 9ರಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಸಂಚರಿಸಿತು. ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಜಿಲ್ಲಾ ಐಇಸಿ ವಿಭಾಗದ ಮಾಲಿನಿ ಸೊಳ್ಳೆಗಳಿಂದ ಹರಡುಬಹುದಾದ ರೋಗಗಳ ಕುರಿತು ಆರೋಗ್ಯ ಶಿಕ್ಷಣ ನೀಡಿದರು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಗರಸಭೆ ಪೌರಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳ ಬಗ್ಗೆ ಮಾಹಿತಿ ನೀಡಿದರು. ಸಿಮೆಂಟ್ ತೊಟ್ಟಿ, ಬ್ಯಾರೆಲ್, ನೀರಿನ ಪರಿಕರಗಳಲ್ಲಿ ಕಂಡುಬಂದ ಲಾರ್ವಾವನ್ನು, ಲಾರ್ವಾ ನಾಶಕ ದ್ರಾವಣ ಸಿಂಪಡಿಸಿದರು.
ನಗರ ಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ಮತ್ತು ಪೂಜಾ ಹಿರೇಮಠ, ಶಾಲೆಯ ಮುಖ್ಯೋಪಾಧ್ಯಾಯ ಎಫ್.ಟಿ.ಟಾಕಪ್ಪನವರ, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ ಹಿತ್ತಲಮನಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎ.ಪಿ.ಪಾಟೀಲ, ಕೃಷ್ಣಪ್ಪ ಕನ್ನಮ್ಮನವರ, ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ ಮುಂಜೋಜಿ, ಸತೀಶ ಎತ್ತಿನಮನಿ, ಅಂಜನಾ ಕೊರವರ, ದೀಪಾ ಸಾವಿಕೇರಿ, ಇತರರು ಹಾಜರಿದ್ದರು.