ಜಿಲ್ಲೆ

ಎಸ್‌ಎಸ್‌ಎಲ್‌ಸಿ ಪರೀಕ್ಷೋತ್ಸವಕ್ಕೆ ವಿದ್ಯಾರ್ಥಿಗಳು ಫಿದಾ; ಶಾಲಾ ಶಿಕ್ಷಣ ಇಲಾಖೆ, ವಿಜಯವಾಣಿ ವತಿಯಿಂದ ಆಯೋಜನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸುವ ಹಾಗೂ ಪರೀಕ್ಷೆಗೆ ಸಿದ್ಧತೆ ಕುರಿತು ಶಾಲಾ ಶಿಕ್ಷಣ ಇಲಾಖೆ ಮತ್ತು ಕನ್ನಡದ ನಂನರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಜಯವಾಣಿ ಪರೀಕ್ಷೋತ್ಸವ ಮಾರ್ಗದರ್ಶಿ’ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿ ಜರುಗಿತು. ವಿಶೇಷ ಉಪನ್ಯಾಸಕ್ಕೆ ಮಕ್ಕಳು ಫಿದಾ ಆದರು.

ಭಗತ್‌ಸಿಂಗ್ ಪಿಯು ಕಾಲೇಜ್ ಸಹಯೋಗದಲ್ಲಿ ನಗರದ ಹಾನಗಲ್ಲ ರಸ್ತೆಯ ಭಗತ್‌ಸಿಂಗ್ ಪಿಯು ಕಾಲೇಜ್‌ನಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೋತ್ಸವ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಶಿಕ್ಷಣ ತಜ್ಞರಿಂದ ಮಾರ್ಗದರ್ಶನ ಪಡೆದರು.

ಧಾರವಾಡದ ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ ಬಹಳ ಮುಖ್ಯ. ಸಮಯ ಪ್ರಜ್ಞೆ ಇರುವ ಮಗುವಿನಲ್ಲಿ ಯಶಸ್ಸು ಸಾಧ್ಯ. ಸಮಯ ಯಾವ ರೀತಿ ಉಪಯೋಗ ಮಾಡಬೇಕು ಎಂಬುದನ್ನು ಮಕ್ಕಳು ಕಲಿಯಬೇಕು ಎಂದರು.

ಎಸ್ಸೆಸ್ಸೆಲ್ಸಿ ಘಟ್ಟ ಮಕ್ಕಳಿಗೆ ಒತ್ತಡ ಕೊಡುವ ಸಮಯವಲ್ಲ, ಅದು ಮನಸ್ಸಿಗೆ ಮುಂದಿನ ಅಡಿಪಾಯ ಹಾಕಲು ಚಾಲನೆ ಕೊಡುವ ಸಮಯವಾಗಿದೆ. ನಾನೂ ಹಾವೇರಿ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಓದಿದ್ದೇನೆ. ಆದರೆ ಆಗ ಅಂಕಗಳ ಪೈಪೋಟಿ ಇರಲಿಲ್ಲ. ಪರೀಕ್ಷೆ ಪಾಸಾಗಬೇಕು ಎಂದಿತ್ತು. ಆದರೀಗ ಕಾಲ ಬದಲಾಗಿದೆ ಎಷ್ಟು ಅಂಕಗಳಿಸಿದರೂ ಕಡಿಮೆ ಎನ್ನುವಂತಾಗಿದೆ ಎಂದರು.

ಆದ್ದರಿಂದ ಮಕ್ಕಳು ಸ್ಪಷ್ಟವಾದ ಗುರಿ ಇಟ್ಟುಕೊಂಡು ಕಾರ್ಯಯೋಜನೆಯ ರೂಪರೇಷೆ ಸಿದ್ಧಪಡಿಸಿಕೊಂಡು ಓದಬೇಕು. ಪರೀಕ್ಷೆ ಹಾಗೂ ಅಂಕ ಗಳಿಸಲು ಮಾತ್ರ ಅಧ್ಯಯನ ಮಾಡದೇ ಜ್ಞಾನಕ್ಕಾಗಿ ಓದಬೇಕು. ಪರೀಕ್ಷೆ ಎದುರಿಸುವುದಲ್ಲ, ಬದಲಾಗಿ ಆನಂದಿಸಬೇಕು. ಎಂಜಾಯ್ ಮಾಡಬೇಕು. ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಏಕಾಗ್ರತೆ ಬಹಳ ಮುಖ್ಯ. ಏಕಾಗ್ರತೆ ಇದ್ದಾಗ ಮಾತ್ರ ಮಕ್ಕಳಿಗೆ ಸಾಧನೆ ಶಕ್ತಿ ಬರುತ್ತದೆ. ಜಗತ್ತಿನ ಮಹಾ ಸಾಧಕರು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಣೆ ಮಾಡಿದ್ದರಿಂದ ಇಂದು ಮಹಾ ಸಾಧಕರ ಪಟ್ಟಿಯಲ್ಲಿದ್ದಾರೆ. ಬಿಲ್‌ಗೇಟ್ಸ್ ಯಾವತ್ತೂ ಶೇ.40ಕ್ಕಿಂತ ಹೆಚ್ಚು ಅಂಕ ಪಡೆದಿಲ್ಲ. ಆದರೆ, ದೇಶಕ್ಕೆ ಆತನ ಕೊಡುಗೆ ಎಷ್ಟು ಎಂಬುದು ಎಲ್ಲರಿಗೂ ಗೊತ್ತು. ಆದ್ದರಿಂದ ಮಕ್ಕಳು ಅಂಕಕ್ಕಿಂತ ಜ್ಞಾನಕ್ಕಾಗಿ ಓದಲು ಮುಂದಾಗಬೇಕು ಎಂದರು.

ಮಕ್ಕಳು ಮೊಬೈಲ್ ಬಳಕೆ ನಿಲ್ಲಿಸಬೇಕು. ಇದರಿಂದ ಏಕಾಗ್ರತೆ, ಸ್ಮರಣಶಕ್ತಿ, ರಚನಾತ್ಮಕ ಬುದ್ಧಿಶಕ್ತಿ ಕಿತ್ತುಕೊಳ್ಳುತ್ತದೆ. ಆದ್ದರಿಂದ ಮೊಬೈಲ್ ಬಳಕೆ ಎಷ್ಟು ಅವಶ್ಯಕತೆಯಿದೆ ಅಷ್ಟನ್ನು ಮಾಡಬೇಕು. ಜೀವನದಲ್ಲಿ ಶಿಕ್ಷಣದ ಜತೆಗೆ ಶಿಕ್ಷಕರಿಗೆ, ಪಾಲಕರಿಗೆ ಗೌರವ ಕೊಡಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದರು.

ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ವಿಧಾನ, ಸರಳವಾಗಿ ಚಿತ್ರ ಬಿಡಿಸುವ ವಿಧಾನ ಹಾಗೂ ಓದಿರುವುದನ್ನು ನೆನಪಿಟ್ಟುಕೊಳ್ಳುವ ವಿಧಾನಗಳನ್ನು ತಿಳಿಪಡಿಸಿದರು. ಅಲ್ಲದೆ ವಿದ್ಯಾರ್ಥಿಗಳು ಓದಿರುವುದನ್ನು ತಿಳಿದುಕೊಳ್ಳುವುದು ಬೇರೆ. ನೆನೆಪು ಇಟ್ಟುಕೊಳ್ಳುವುದು ಬೇರೆ. ಓದಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಓದಿದ್ದು ಪರೀಕ್ಷೆ ಸಮಯದಲ್ಲಿ ಸರಳವಾಗಿ ನೆನಪಿಗೆ ಬರಲಿದೆ ಎಂದು ಸಲಹೆ ನೀಡಿದರು.

ಡಿಡಿಪಿಐ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ ಮಾತನಾಡಿದರು. ವಿಜಯವಾಣಿ ಜಿಲ್ಲಾ ವರದಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಭಗತ್‌ಸಿಂಗ್ ಸಮೂಹ ಸಂಸ್ಥೆಗಳ ಚೇರ್ಮನ್ ಸತೀಶ ಎಂ.ಬಿ., ನಿಜಲಿಂಗಪ್ಪ ಬಸೇಗೆಣ್ಣಿ, ಮತ್ತಿತರರು ಉಪಸ್ಥಿತರಿದ್ದರು.

ಮಂಜುನಾಥ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಇಸಿಒ ಎಸ್.ಆರ್ ಹಿರೇಮಠ ಸ್ವಾಗತಿಸಿದರು. ಇಸಿಒ ಓಂಪ್ರಕಾಶ ಯತ್ನಳ್ಳಿ ವಂದಿಸಿದರು. ಇಸಿಒ ಬಿ.ಕೆ ಹನುಮಗೌಡ್ರ ನಿರೂಪಿಸಿದರು.

ಡಾ.ವಿಜಯ ಸಂಕೇಶ್ವರ ಅವರ ಸಾಧನೆ ನೋಡಿ...

ಕೇವಲ ಒಂದು ಲಾರಿಯಿಂದ ಉದ್ಯಮ ಆರಂಭಿಸಿದ ಡಾ.ವಿಜಯ ಸಂಕೇಶ್ವರ ಅವರು ಇದೀಗ ದೇಶದೆಲ್ಲೆಡೆ ಪ್ರತಿ ರಸ್ತೆಯಲ್ಲೂ ಅವರ ಲಾರಿಗಳು ಓಡಾಡುವಂತೆ ಮಾಡಿದ್ದಾರೆ. ಲಾಜಿಸ್ಟಿಕ್ ಹಾಗೂ ಪತ್ರಿಕೋದ್ಯಮದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಒಬ್ಬ ವ್ಯಕ್ತಿಗೆ ಒಂದು ಹುಚ್ಚಿನೊಂದಿಗೆ ಕಿಚ್ಚು ಇರಲಿಲ್ಲ ಅಂದರೆ ಇಂಥ ಯಶಸ್ಸು ಸಾಧ್ಯವಿಲ್ಲ ಎಂಬುದಕ್ಕೆ ಡಾ.ವಿಜಯ ಸಂಕೇಶ್ವರ ಅವರ ಸಾಧನೆಯೇ ಉದಾಹರಣೆಯಾಗಿದೆ. ಇವರ ಸಾಧನೆಗೆ ಬೆನ್ನೆಲುಬಾಗಿ ಡಾ.ಆನಂದ ಸಂಕೇಶ್ವರ ಅವರು ಮಹತ್ತರ ಕಾರ್ಯ ಮಾಡುತ್ತಿದ್ದಾರೆ ಎಂದು ಡಾ.ಆನಂದ ಪಾಂಡುರಂಗಿ ಬಣ್ಣಿಸಿದರು.

ಕೋಟ್... 

ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಪರೀಕ್ಷೆ ಭಯ ಸೇರಿ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೈದ್ಯರು ಸೇರಿ ಶಿಕ್ಷಣ ತಜ್ಞರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ತಜ್ಞರು ಹೇಳುವುದನ್ನು ಗಮನವಿಟ್ಟು ಕೇಳಬೇಕು. ತಜ್ಞರು ನೀಡುವ ಮೌಲ್ಯಾಧಾರಿತ ವಿಷಯಗಳನ್ನು ವಿದ್ಯಾಭ್ಯಾಸದಲ್ಲಿ ರೂಢಿಸಿಕೊಂಡರೆ ವಿದ್ಯಾರ್ಥಿಗಳ ಜೀವನ ಉಜ್ವಲ ಆಗಲಿದೆ. ಜಿಲ್ಲೆಯ ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ ಬಹಳಷ್ಟು ವಿಶೇಷ ತರಗತಿ ಮಾಡಿದ್ದೇವೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡೆದುಕೊಂಡು ಚೆನ್ನಾಗಿ ಪರೀಕ್ಷೆ ಬರೆಯಬೇಕು. ಜಿಲ್ಲೆಗೆ ಕೀರ್ತಿ ತರಬೇಕು.

- ಸುರೇಶ ಹುಗ್ಗಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಹಾವೇರಿ

ಕೋಟ್...  

ಜಿಲ್ಲೆಯ ಫಲಿತಾಂಶ ನೂರಕ್ಕೆ ನೂರರಷ್ಟಾಗಬೇಕು ಎಂಬ ಉದ್ದೇಶದಿಂದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಇಂಥ ಕಾರ್ಯಕ್ರಮ ಬಹಳ ಅನೂಕೂಲ ಆಗಿವೆ. ಪರೀಕ್ಷೆಗೆ ಸಿದ್ಧವಾಗುವ ಮುನ್ನ ಮಾರ್ಗದರ್ಶನ ಬೇಕು. ಅದಕ್ಕಾಗಿ ತಜ್ಞರನ್ನು ಕರೆಯಿಸಿದ್ದೇವೆ. ಇದರ ಉಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು.

- ಗಿರೀಶ ಪದಕಿ, ಉಪ ನಿರ್ದೇಶಕ (ಅಭಿವೃದ್ಧಿ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಹಾವೇರಿ