ಜಿಲ್ಲೆ

ಮಹಿಳೆ ಅಬಲೆಯಲ್ಲ, ಸಬಲೆ, ಕಾಮಧೇನು ಸ್ವರೂಪಿ' ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಭಿಪ್ರಾಯ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮಹಿಳೆ ಅಬಲೆಯಲ್ಲ, ಸಬಲೆ ಎಂದು ನಿರೂಪಿಸಿದ್ದಾಳೆ. ಅವಳು ಕಾಮಧೇನು ಸ್ವರೂಪಿಯಾಗಿದ್ದಾಳೆ. ಮಹಿಳೆ ಎಲ್ಲ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಸ್ತ್ರೀಯನ್ನು ಶಕ್ತಿಸ್ವರೂಪಿಯಾಗಿ ಆರಾಧಿಸುವ ದೇಶ ನಮ್ಮದು ಎಂದು ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೌಶಲಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಹಾಗೂ ತಾಲೂಕು ಪಂಚಾಯಿತಿ ಮಹಿಳಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಮದರ್ ಥೆರೆಸಾ, ಸಾಲು ಮರದ ತಿಮ್ಮಕ್ಕ, ಇಂದಿರಾ ಗಾಂಧೀ, ಸಾವಿತ್ರಿಬಾಯಿ ಫುಲೆ, ಸುಧಾ ಮೂರ್ತಿ, ಆರತಿ ಸರೀನ್ ಮುಂತಾದ ಮಹಿಳೆಯರು ಸಾಧನೆ ಮಾಡಿದ್ದಾರೆ. ಮಹಿಳೆ ಅಡುಗೆ ಮನೆಯಿಂದ ಹಿಡಿದು ರಣರಂಗದವರೆಗೂ ಮಹಿಳೆ ಎಲ್ಲ ರಂಗದಲ್ಲೂ ಬೆಳೆದಿದ್ದಾಳೆ. ಸರ್ಕಾರದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿವೆ. ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಮಾತನಾಡಿ, ಇತ್ತೀಚೆಗೆ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ಕುಟುಂಬದ ಜವಾಬ್ದಾರಿ ಜತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ತಾಪಂ ಆಡಳಿತಾಧಿಕಾರಿ ಸುರೇಶ ಹುಗ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ, ವಲಯ ಮೇಲ್ವಿಚಾರಕಿ ಇಂದಿರಾ ಕನವಳ್ಳಿ, ಮತ್ತಿತರರು ಉಪಸ್ಥಿತರಿದ್ದರು.

ತಾಪಂ ಗ್ರಾ.ಉ ಸಹಾಯಕ ನಿರ್ದೇಶಕ ಜಿ.ಜಿ ನಾಯಕ ಸ್ವಾಗತಿಸಿದರು. ಶಿಲ್ಪಾ ಕಡ್ಡಿಪುಡಿ ಹಾಗೂ ಚಂದ್ರು ಮಾಳಪ್ಪನವರ ನಿರೂಪಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಬಾರ್ಕಿ ವಂದಿಸಿದರು.