ಹಾವೇರಿ: ನಗರದಲ್ಲಿ ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ನಿಟ್ಟಿನಲ್ಲಿ ನಡೆದಿರುವ ಕಾಮಗಾರಿಯಿಂದ ಹಾಳಾದ ರಸ್ತೆ ಗುಂಡಿಗಳನ್ನು ಮುಚ್ಚಲು ಸಂಬಂದಪಟ್ಟ ಏಜೆನ್ಸಿಯವರಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಶುಕ್ರವಾರ ನಗರದ ವಿವಿಧ ರಸ್ತೆಗಳಿಗೆ ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದಿರುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಸಮಯದಲ್ಲಿ ಅಗೆಯಲಾದ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಏಜೆನ್ಸಿವರಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ಲೋಕೋಪಯೋಗಿ ಬಂದರು ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಗ್ಯಾಸ್ ಪೈಪ್‌ಲೈನ್ ಏಜೆನ್ಸಿ ಪ್ರತಿನಿಧಿಗಳು ಹಾಜರಿದ್ದರು.
ಗ್ಯಾಸ್‌ಪೈಪ್‌ಲೈನ್ ಕಾಮಗಾರಿಯ ಅದ್ವಾನದ ಕುರಿತು ‘ವಿಜಯವಾಣಿ’ ಸರಣಿ ವರದಿ ಮಾಡುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು. ವರದಿ ಬೆನ್ನಲ್ಲೇ ಡಿಸಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ದುರಸ್ತಿಗೆ ಆಗ್ರಹಿಸಿದ್ದಾರೆ.