ಜಿಲ್ಲೆ

ಚೆಕ್‌ಪೋಸ್ಟ್‌ಗಳ ಕಾರ್ಯವೈಖರಿ ಪರಿಶೀಲಿಸಿದ ಡಿಸಿ; ಹಾವೇರಿ, ಹಾನಗಲ್ಲ ತಾಲೂಕಿನ ವಿವಿಧೆಡೆ ದಿಢೀರ್ ಭೇಟಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಚುನಾವಣಾ ಅಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ತೀವ್ರ ನಿಗಾ ವಹಿಸಿದ್ದು, ನೀತಿಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮಾ.16ರಿಂದಲೇ ಎಲ್ಲ ಚೆಕ್‌ಪೋಸ್ಟ್‌ಗಳು ಕಾರ್ಯಾರಂಭ ಮಾಡಿದ್ದು, ನಗರದ ಆರ್‌ಟಿಓ ಕಚೇರಿ ಬಳಿ, ಹಾನಗಲ್ಲ ತಾಲೂಕು ಗೊಂದಿ, ಹೈಳ್ಳಿಬೈಲ್ ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಅನಿರೀಕ್ಷಿತ ಭೇಟಿ ನೀಡಿ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿ ಜಿಲ್ಲೆಯಲ್ಲಿ 18 ಹಾಗೂ ಗದಗ ಜಿಲ್ಲೆಯಲ್ಲಿ 10 ಸೇರಿ ಒಟ್ಟು 28 ಚೆಕ್ ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಚುನಾವಣಾ ಬಳಕೆಗಾಗಿ ಅಕ್ರಮ ಮದ್ಯ, ಹಣ ಹಾಗೂ ಇತರ ವಸ್ತುಗಳ ಸಾಗಾಣಿಕೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಂತರ ಜಿಲ್ಲಾ ಗಡಿ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
28 ಚೆಕ್‌ಪೋಸ್ಟ್‌ಗಗಳ ವಿವರ
ಹಾನಗಲ್ಲ ಕ್ಷೇತ್ರದ ಕೊಪ್ಪರಸಿಕೊಪ್ಪ, ಗೊಂದಿ, ಹಳ್ಳಿಬೈಲ್, ಸಮ್ಮಸಗಿ, ಹಾವೇರಿ ಕ್ಷೇತ್ರದ ಯಲವಿಗಿ, ಹಾವೇರಿ ಆರ್‌ಟಿಒ ಕಚೇರಿ, ತೆರೆದಹಳ್ಳಿ, ಕಂಚಾರಗಟ್ಟಿ, ಬ್ಯಾಡಗಿ ಕ್ಷೇತ್ರದ ಕುಮ್ಮೂರ ಕ್ರಾಸ್ ಹಾಗೂ ಮೊಟೇಬೆನ್ನೂರ ಗ್ರಾಮದಲ್ಲಿ ಚೆಕ್‌ಪೋಸ್ಟ್ ಆರಂಭಿಸಲಾಗಿದೆ.
ಹಿರೇಕೆರೂರ ಕ್ಷೇತ್ರದಲ್ಲಿ ಕೋಡಮಗ್ಗಿ, ಹಳ್ಳೂರು, ಹುಲಬಿಕೊಂಡ, ಜಾವಳ್ಳಿ ಹಾಗೂ ರಾಣೆಬೆನ್ನೂರ ಕ್ಷೇತ್ರದಲ್ಲಿ ಮಾಕನೂರ ಕ್ರಾಸ್, ತುಮ್ಮಿನಕಟ್ಟಿ, ಹರನಗಿರಿ ಬ್ರಿಡ್ಜ್ ಹಾಗೂ ಮಾಗೋಡ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್ ಆರಂಭಿಸಲಾಗಿದೆ.
ಶಿರಹಟ್ಟಿ ಕೇತ್ರದಲ್ಲಿ ಬೆಳ್ಳಟ್ಟಿ ಹೊಳೆಇಟಗಿ ರಸ್ತೆ, ಗೋವನಾಳನ ಸವಣೂರ ರಸ್ತೆ, ರಾಮಗೇರಿಯ ಸವಣೂರ ರಸ್ತೆ, ಕೊರ್ಲಹಳ್ಳಿ ಹಡಗಲಿ ರಸ್ತೆ, ಮುಂಡರಗಿಯಯಲ್ಲಿ ಕೊಪ್ಪಳ ರಸ್ತೆಯಲ್ಲಿ ಹಾಗೂ ಗದಗದ ಕ್ಷೇತ್ರದ ದುಂದುರನ ಹುಬ್ಬಳ್ಳಿ ರಸ್ತೆಯಲ್ಲಿ ಚೆಕ್‌ಪೋಸ್ಟ್ ಆರಂಭಿಸಲಾಗಿದೆ. ರೋಣ ಕ್ಷೇತ್ರದಲ್ಲಿ ಮುಂಡರಗಿ ತಾಲೂಕು ಹಳ್ಳಿಕೇರಿ ಗ್ರಾಮದಲ್ಲಿ, ಹಿರೇಹಾಳ ಬಾದಾಮಿ ರಸ್ತೆ, ಗಜೇಂದ್ರಗಡ ಇಳಕಲ್ಲ ಕ್ರಾಸ್, ಗಜೇಂದ್ರಗಡ ರೋಣ ರಸ್ತೆಯಲ್ಲಿ ಚೆಕ್‌ಪೋಸ್ಟ್ ಆರಂಭಿಸಲಾಗಿದೆ.