ಜಿಲ್ಲೆ

ಅಲ್ಟ್ರಾ ಸ್ಕ್ಯಾನ್ ಪರೀಕ್ಷೆ ವೇಗ ಹೆಚ್ಚಿಸಲು ಡಿಸಿ ಸೂಚನೆ; ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ, ಪರಿಶೀಲನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ರಕ್ತ ಪರೀಕ್ಷೆ ವರದಿ ನೀಡಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಜತೆಗೆ ಅಲ್ಟ್ರಾ ಸ್ಕ್ಯಾನ್ ಪರೀಕ್ಷೆಗೆ ಎರಡು ತಿಂಗಳು ಸಮಯ ಕೊಡುತ್ತಿರುವ ಆರೋಪವಿದೆ. ಇನ್ನುಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಡಿಸಿ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲಿಸಿದರು. ಆಸ್ಪತ್ರೆ ಮುಂಭಾಗದಲ್ಲಿ ಪಾರ್ಕಿಂಗ್ ಅವ್ಯವಸ್ಥೆಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ವಾಹನಗಳನ್ನು ಆಸ್ಪತ್ರೆಯ ಹೊರಗಡೆ ನಿಲ್ಲಿಸುವಂತೆ ಸೂಚಿಸಿದರು. ಗೇಟ್ ಮುಂದೆ ಗೃಹರಕ್ಷಕರು ಸರಿಯಾದ ಭದ್ರತೆ ಕೈಗೊಳ್ಳಬೇಕೆಂದರು.
ಓಪಿಡಿ ವಿಭಾಗದ ದಟ್ಟಣೆ ಕಂಡ ಡಿಸಿ ಹೊಸ ಎರಡು ಕೌಂಟರ್ ತೆರೆಯಿರಿ. ಜತೆಗೆ ಪಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಿ ಎಂದರು. ಎಂಸಿಎಚ್ ಆಸ್ಪತ್ರೆಗೆ ತೆರಳಿ ಅಲ್ಲಿಯೂ ಹೆಚ್ಚುವರಿ ಕೌಂಟರ್ ಮಾಡಲು ಸೂಚಿಸಿದರು. ಬಳಿಕ ಆಸ್ಪತ್ರೆಯ ಮೇಲ್ಬಾಗದಲ್ಲಿ ನಡೆಯುತ್ತಿರುವು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಯಾಕೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದರು. ಎರಡು ದಿನಗಳಲ್ಲಿ ಅದನ್ನು ಬಳಸಿಕೊಳ್ಳಿ ಎಂದು ಹಾವೇರಿ ಮೆಡಿಕಲ್ ಕಾಲೇಜ್ ಡೀನ್ ಡಾ.ಪ್ರದೀಪಕುಮಾರ ಹಾಗೂ ಜಿಲ್ಲಾಸ್ಪತ್ರೆ ಡಿಎಸ್ ಡಾ.ಪಿ.ಆರ್.ಹಾವನೂರಗೆ ನಿರ್ದೇಶಿಸಿದರು.
ಮುಖ್ಯ ಕಟ್ಟಡದ ಮೇಲ್ಬಾಗದಲ್ಲಿ ನಡೆಯುತ್ತಿರುವ ಆಡಳಿತ ಕಚೇರಿಯ ಕಾಮಗಾರಿ ಮಂತಗತಿಯಲ್ಲಿ ಸಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಗುತ್ತಿಗೆದಾರರಿಗೆ ಯಾವಾಗ ಕಟ್ಟಡ ಬಳಕೆ ನೀಡುತ್ತಿರಿ. ಸರಿಯಾದ ಸಮಯ ತಿಳಿಸಿ ಎಂದು ತರಾಟೆ ತೆಗೆದುಕೊಂಡರು.
ಕೋಟ್:
ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಭೇಟಿ ಕಾಮಗಾರಿ ಪೂರ್ಣಗೊಳ್ಳಲು ಸಮಯ ನಿಗದಿ ಮಾಡಿದ್ದರು. 15 ದಿನದಲ್ಲಿ ಆಡಳಿತ ಕಚೇರಿ ಬಳಕೆಗೆ ಲಭ್ಯವಾಗಲಿದೆ. ಆಸ್ಪತ್ರೆಯ ಮೇಲ್ಬಾಗದ ಕಾಮಗಾರಿಯನ್ನು ಅಕ್ಟೋಬರ್‌ನೊಳಗೆ ಪೂರ್ಣಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಸಹಕಾರವಾಗಲಿದೆ.
ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ