ಜಿಲ್ಲೆ

ನಗರದ ಕಾಲುವೆಗಳ ಸ್ವಚ್ಛತೆಗೆ ಆದ್ಯತೆ ನೀಡಿ; ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ನಗರಗಳಿಗೆ ಶನಿವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ, ಚರಂಡಿ, ಕಾಲುವೆ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ಥಿ ಕಾಮಗಾರಿಗಳನ್ನು ವೀಕ್ಷಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ದಿನೇ ದಿನೇ ವ್ಯಾಪಕ ಮಳೆಯಾಗುತ್ತಿದೆ. ನಗರದ ಚರಂಡಿಗಳು ಸ್ವಚ್ಛವಾಗಿರಬೇಕು. ಮಳೆ ನೀರು ಚರಂಡಿ ಕಾಲುವೆಗಳ ಮೂಲಕ ಸಾರಾಗವಾಗಿ ಹರಿದು ಹೋಗಬೇಕು. ಈ ನಿಟ್ಟಿನಲ್ಲಿ ಎಲ್ಲ ಚರಂಡಿ ಹಾಗೂ ಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎರಡು ದಿನಗಳ ಹಿಂದೆ ಸುರಿದ ಬಾರಿ ಮಳೆಗೆ ಮಳೆಯ ನೀರು ರಸ್ತೆ ಮೇಲೆ ಬಂದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಮಾಡಿತ್ತು. ಇದು ಮತ್ತೆ ಮರುಕಳಿಸಬಾರದು ಎಂದು ಹಾವೇರಿ ನಗರಸಭೆ ಹಾಗೂ ಇತರ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಸಿದರು.

ಮಳೆಗಾಲದಲ್ಲಿ ಜನರಿಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗದ ಹಾಗೆ ನೋಡಿಕೊಳ್ಳಬೇಕು. ನಗರದಲ್ಲಿ ಕುಡಿಯುವ ನೀರಿನ ಎಲ್ಲ ಪೈಪ್‌ಗಳನ್ನು ದುರಿಸ್ತಿಪಡಿಸಬೇಕು. ಕಲುಷಿತ ನೀರು ರೋಗ ರುಜಿನಗಳಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಸದ್ಯದ ಮಟ್ಟಿಗೆ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಅರಿವು ಮೂಡಿಸಬೇಕು. ಮನೆ ಮುಂದೆ ಮಳೆಯ ನೀರು ನಿಲ್ಲದ ಹಾಗೆ ನೋಡಿ ಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.