ಜಿಲ್ಲೆ

ವಸತಿ ಯೋಜನೆಗೆ ಲಂಚ ಆರೋಪಕ್ಕೆ ಸಾಕ್ಷಿ ಇಲ್ಲ; ಸ್ಥಳಕ್ಕೆ ಎಸಿ ಭೇಟಿ ಪರಿಶೀಲನೆ, ಆರೋಪ ಸುಳ್ಳು ಎಂದ ಡಿಸಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಬಾಕಿ ಬಿಲ್ ಮಂಜೂರಾತಿಗಾಗಿ ಸಂತ್ರಸ್ತರೊಬ್ಬರು ತಮ್ಮ ಪತ್ನಿಯ ಮಾಂಗಲ್ಯ ಸರ ಒತ್ತೆ ಇಟ್ಟು ಸರ್ಕಾರಿ ನೌಕರನಿಗೆ 20 ಸಾವಿರ ರೂ. ಲಂಚ ನೀಡಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಈ ಆರೋಪ ಸುಳ್ಳು ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲಂಚದ ಆರೋಪ ಗಮನಕ್ಕೆ ಬಂದ ಕೂಡಲೇ ಹಾವೇರಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಅವರನ್ನು ಗುರುವಾರ ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗಿದೆ. ಸಂತ್ರಸ್ತ ಹಾಗೂ ಅವರ ಪತ್ನಿಯಿಂದ ಹೇಳಿಕೆ ಪಡೆಯಲಾಗಿದೆ.

ಹಾವೇರಿ ತಾಲೂಕಿನ ಮಹಾಂತೇಶ ಮರಡೂರ ಎಂಬುವರು 2022-23ನೇ ಸಾಲಿನಲ್ಲಿ ರಾಜೀವಗಾಂಧಿ ವಸತಿ ನಿಗಮ ನಿಯಮಿತದಿಂದ 4 ಹಂತದಲ್ಲಿ ಪರಿಹಾರ ಪಡೆದುಕೊಂಡಿದ್ದಾರೆ. ಎಸಿ ಚನ್ನಪ್ಪ ಗುರುವಾರ ಗುತ್ತಲದ ಫೈನಾನ್ಸ್‌ವೊಂದಕ್ಕೆ ಕರೆದೊಯ್ದು ಪರಿಶೀಲಿಸಿದ್ದು, ಚಿನ್ನದ ಸರ ಹಾಗೂ ಕಿವಿಯೋಲೆ ಮಾತ್ರ ಅಡ ಇಟ್ಟು, ಸಾಲ ಪಡೆದು ಮನೆ ನಿರ್ಮಾಣಕ್ಕೆ ಬಳಸಿದ್ದಾರೆ. ಮಾಂಗಲ್ಯ ಪತ್ನಿಯ ಬಳಿ ಇದೆ ಎಂದು ದಂಪತಿ ತಿಳಿಸಿದ್ದಾರೆ. ಮನೆ ಮಂಜೂರಾತಿಯ ಬಾಕಿ ಹಣ ಕೇಳಲು ಆಗಾಗ ತಹಸೀಲ್ದಾರ್ ಕಚೇರಿಗೆ ಹೋಗಿ ಬರುತ್ತಿದ್ದೆ. ಆದರೆ, ಯಾರೂ ನನ್ನ ಬಳಿ ಹಣ ಕೇಳಿಲ್ಲ. ನಾನೂ ಲಂಚ ಕೊಟ್ಟಿಲ್ಲ ಎಂದು ಮಹಾಂತೇಶ ಹಾಗೂ ಅವರ ಪತ್ನಿ ಸ್ವಯಂ ಲಿಖಿತ ಹೇಳಿಕೆ ನೀಡಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.