climate change, low angle view Thermometer on blue sky with sun shining in summer show increase temperature, concept global warming 
ಜಿಲ್ಲೆ

ಬಿರು ಬೇಸಿಗೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ; ಸಾರ್ವಜನಿಕರಿಗೆ ಡಿಸಿ ರಘುನಂದನ ಮೂರ್ತಿ ಸಲಹೆ

ಹಾವೇರಿ: ಬೇಸಿಗೆ ಸಮಯದಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಹೀಟ್‌ವೇವ್(ಶಾಖದ ಹೊಡೆತ) ಸ್ಟ್ರೋಕ್‌ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ರಘುನಂದನ ಮೂರ್ತಿ ಸಲಹೆ ನೀಡಿದ್ದಾರೆ.
ಗರಿಷ್ಠ ತಾಪಮಾನದ ಅವಧಿ ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿನಲ್ಲಿ ಹೋಗಬೇಡಿ. ಈ ಸಮಯದಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಮನೆಯಿಂದ ಹೊರಗೆ ಹೋಗುವಾಗ ನೀರಿನ ಬಾಟಲ್, ಛತ್ರಿ, ಟೋಪಿ, ಗ್ಲೂಕೋಸ್, ಮೌಖಿಕ ರೀಹೈಡ್ರೇಷನ್ ಪೌಡರ್, ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಿ.
ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ, ಟೋಪಿ ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು. ಹೆಚ್ಚು ನೀರು ಕುಡಿಯಬೇಕು. ಮೂರ್ಛೆ ಅಥವಾ ಅನಾರೋಗ್ಯ ಉಂಟಾದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೆಟೆಡ್ ತಂಪು ಪಾನೀಯಗಳನ್ನು ಸೇವಿಸಬಾರದು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು. ಮನೆಯಲ್ಲಿ ತಯಾರಿಸಿದ ನಿಂಬೆ ನೀರು, ಮಜ್ಜಿಗೆ, ಮುಂತಾದ ಪಾನೀಯಗಳು ಹಾಗೂ ಓಆರ್‌ಎಸ್‌ನ್ನು ಬಳಸಬೇಕು.
ಹಗುರವಾದ, ತಿಳಿಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಬಿಡಬಾರದು. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಬೇಕು ಹಾಗೂ ಅವುಗಳಿಗೆ ಸಾಕಷ್ಟು ನೀರು ಒದಗಿಸಬೇಕು. ಮನೆಯನ್ನು ತಂಪಾಗಿರಿಸಲು ಪರೆದೆಗಳು, ಶೆಟರ್‌ಗಳು ಅಥವಾ ಸನ್ ಶೆಡ್‌ಗಳನ್ನು ಬಳಸಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.