ಹಾವೇರಿ: ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಹಾಗೂ ಇತರೆ ಮಾದಕ ಪದಾರ್ಥಗಳ ಬೆಳೆ ಬೆಳೆಯುತ್ತಿರುವ ಕುರಿತು ಕಾಲಕಾಲಕ್ಕೆ ಆಯಾ ಇಲಾಖೆಗಳು ಪರಿಶೀಲಿಸಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಬೆಳೆ ನಾಶಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ನಗರದ ಹೊರವಲಯ ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ನಾರ್ಕೊ ಸಮನ್ವಯ ಕೇಂದ್ರ (ಎನ್‌ಸಿಒಆರ್‌ಡಿ)’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡ್ರಗ್ಸ್ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯ ಎಲ್ಲ ಪದವಿ, ಡಿಪ್ಲೊಮಾ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಹಾಗೂ ಕಾನೂನು ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯ ಆಗಬೇಕು ಎಂದು ನಿರ್ದೇಶಿಸಿದರು.
ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೇ ಯಾವುದೇ ಮಾತ್ರೆ ಹಾಗೂ ಔಷಧಗಳನ್ನು ನೀಡುವಂತಿಲ್ಲ. ಈ ಕುರಿತು ಔಷಧ ಅಂಗಡಿಗಳಲ್ಲಿ ಸೂಚನಾ ಫಲಕ ಅಳವಡಿಸಲು ನಿರ್ದೇಶನ ನೀಡುವಂತೆ ಜಿಲ್ಲಾ ಡ್ರಗ್ ಕಂಟ್ರೋಲರ್‌ಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ನಾನು ಜಿಲ್ಲೆಗೆ ಬಂದಮೇಲೆ ಎರಡು ಪ್ರಕರಣಗಳಲ್ಲಿ ಮೂರು ಕೆ.ಜಿ.ಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾದಕ ವ್ಯಸನಿಗಳ ಪತ್ತೆಗೆ ಪೊಲೀಸ್ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಹಾಗೂ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಅರಣ್ಯ, ಕೃಷಿ, ಅಬಕಾರಿ, ವೈದ್ಯಕೀಯ ಕಾಲೇಜ್, ಪದವಿಪೂರ್ವ ಶಿಕ್ಷಣ ಇಲಾಖೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಾಸ್ಟೆಲ್‌ಗಳ ಮೇಲೆ ನಿಗಾ ಇಡಿ
ಮಾದಕ ವಸ್ತುಗಳ ಬಳಕೆ ಕುರಿತು ವೃತ್ತಿಪರ ಕೋರ್ಸ್ ಕಾಲೇಜ್‌ಗಳು ಹಾಗೂ ವಿದ್ಯಾರ್ಥಿ ನಿಲಯಗಳು, ಜಿಮ್‌ಗಳು, ಕ್ಲಬ್ ಹಾಗೂ ಬಾರ್‌ಗಳು, ಪಿಕ್‌ನಿಕ್ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಕೋರಿಯರ್, ಕೆ.ಎಸ್.ಆರ್.ಟಿ.ಸಿ. ಪಾರ್ಸಲ್‌ಗಳ ಪರಿಶೀಲನೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಆ್ಯಪ್ ಬಳಕೆಗೆ ಎಸ್‌ಪಿ ಸಲಹೆ
ಮಾದಕ ವಸ್ತುಗಳ ಬಳಕೆ ನಿಯಂತ್ರಿಸಲು ಡ್ರಗ್ಸ್ ಫ್ರೀ ಕರ್ನಾಟಕ ಆ್ಯಪ್ ಬಿಡುಗಡೆ ಮಾಡಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರತಿಯೊಬ್ಬರೂ ಇದನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಮಾದಕ ಕಳ್ಳ ಸಾಕಾಣಿಕೆ ಹಾಗೂ ಮಾದಕ ವ್ಯಸನಿಗಳು ಕಂಡು ಬಂದಲ್ಲಿ ಆ್ಯಪ್‌ನಲ್ಲಿ ದಾಖಲಿಸಿದರೆ, ಈ ಸಂದೇಶ ಪೊಲೀಸ್ ಇಲಾಖೆಗೆ ರವಾನೆಯಾಗುತ್ತದೆ. ಇದರಿಂದ ಮಾದಕ ವಸ್ತುಗಳ ಹಾವಳಿ ತಡೆಗೆ ಸಾಧ್ಯವಾಗುತ್ತದೆ ಎಂದು ಎಸ್‌ಪಿ ಯಶೋಧಾ ಹೇಳೀದರು.