ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಹಾವೇರಿ, ಶಿಗ್ಗಾಂವಿ, ಹಾನಗಲ್ಲ, ರಾಣೆಬೆನ್ನೂರ, ಸವಣೂರ, ಬ್ಯಾಡಗಿ ಹಾಗೂ ಹಿರೇಕೆರೂರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಹಾಗೂ ಮಾರ್ಗಸೂಚಿ ಅನ್ವಯ ಗುಣಮಟ್ಟದ ಸೋಯಾಬಿನ್(ಹಳದಿ) ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರಿಗೆ ಸೂಚಿಸಿದರು.
ಸರ್ಕಾರದ ಆದೇಶದನ್ವಯ ಪ್ರತಿ ರೈತರಿಂದ ಪ್ರತಿ ಎಕರೆಗೆ ಐದು ಕ್ವಿಂಟಲ್‌ನಂತೆ ಹಾಗೂ ಪ್ರತಿಯೊಬ್ಬ ರೈತರಿಂದ 20 ಕ್ವಿಂಟಲ್ ಖರೀದಿಗೆ ಅವಕಾಶವಿದೆ. ಸೋಯಾಬೀನ್ ಖರೀದಿ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಬೇಕು ಎಂದು ಸೂಚಿಸಿದರು.
ಆಯಾ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕೇಂದ್ರ ತೆರೆಯುವಂತೆ ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಸೂಚಿಸಿದರು. ರೈತರಿಂದ ಖರೀದಿಸುವ ಸೋಯಾಬಿನ್ ಎಫ್.ಎ.ಕ್ಯೂ ಗುಣಮಟ್ಟ ಗುರುತಿಸಲು ಖರೀದಿ ಕೇಂದ್ರಗಳಿಗೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಸೋಯಾಬಿನ್ ಹುಟ್ಟುವಳಿ ದಾಸ್ತಾನಿಗೆ ಜಿಲ್ಲೆಯಲ್ಲಿರುವ ರಾಜ್ಯ ಉಗ್ರಾಣಗಳಲ್ಲಿ ಸ್ಥಳ ಕಾಯ್ದಿರಿಸಲು ರಾಜ್ಯ ಉಗ್ರಾಣ ನಿಮಗದ ಆಯಾ ತಾಲೂಕು ಉಗ್ರಾಣ ವ್ಯವಸ್ಥಾಪಕರಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಲ್.ಪ್ರದೀಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
4,892 ರೂ. ಬೆಂಬಲ ಬೆಲೆ
ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ 4,892 ರೂ.ನಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. 45 ದಿನಗಳವರೆಗೆ ರೈತರ ನೋಂದಣಿ ಆರಂಭಿಸಿ, 90 ದಿನಗಳವರೆಗೆ ಖರೀದಿಸಬೇಕು. ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು. ಕರಪತ್ರಗಳ ಮೂಲಕ ರೈತರಿಗೆ ಖರೀದಿ ಕೇಂದ್ರಗಳ ಮಾಹಿತಿ ನೀಡಲು ಡಿಸಿ ಸೂಚನೆ ನೀಡಿದರು.
13 ಸಾವಿರ ಹೆಕ್ಟರ್ ಬೆಳೆ
ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 13,386 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯಲಾಗಿದೆ. ಹಾವೇರಿ ತಾಲೂಕಿನಲ್ಲಿ 3,392 ಹೆಕ್ಟೇರ್, ಶಿಗ್ಗಾಂವಿ ತಾಲೂಕಿನಲ್ಲಿ 3,972 ಹೆಕ್ಟೇರ್, ಹಾನಗಲ್ಲ ತಾಲೂಕಿನಲ್ಲಿ 2,110 ಹೆಕ್ಟೇರ್, ರಾಣೆಬೆನ್ನೂರ ತಾಲೂಕಿನಲ್ಲಿ 1,791 ಹೆಕ್ಟೇರ್, ಸವಣೂರ ತಾಲೂಕಿನಲ್ಲಿ 1,510 ಹೆಕ್ಟೇರ್, ಬ್ಯಾಡಗಿ ತಾಲೂಕಿನಲ್ಲಿ 430 ಹೆಕ್ಟೇರ್ ಮತ್ತು ಹಿರೇಕೆರೂರ ತಾಲೂಕಿನ 102 ಹೆಕ್ಟೇರ್ ಸೋಯಾಬೀನ್ ಬಿತ್ತನೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ವಿವರಿಸಿದರು.