ಹಾವೇರಿ: ಸಾಮಾಜಿಕ ದೌರ್ಜನ್ಯಕ್ಕೊಳಗಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕುಟುಂಬಗಳಿಗೆ ಕಾನೂನಿನ ರಕ್ಷಣೆ ಮತ್ತು ಆರ್ಥಿಕ ನೆರವಿನ ನಂತರ ಅವರ ಕುಟುಂಬಗಳಲ್ಲಿ ಉಂಟಾಗಿರುವ ಸಾಮಾಜಿಕ ಬದಲಾವಣೆ ಕುರಿತಂತೆ ಮಾಹಿತಿ ಸಂಗ್ರಹಿಸಿ. ಆ ಕುಟುಂಬಗಳ ಸಮಸ್ಯೆಗಳನ್ನು ಅರಿಯಲು ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ. ಕುಟುಂಬವಾರು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಎಸ್‌ಸಿಎಸ್‌ಟಿ-ಟಿಎಸ್‌ಪಿ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗಾಗಿ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಹಾಗೂ ಯೋಜನೆಗಳ ಫಲಾನುಭವಿಗಳ ಅರ್ಹತೆ ಕುರಿತಂತೆ ಇಲಾಖೆವಾರು ಮಾಹಿತಿ ಕ್ರೋಢಿಕರಿಸಿ ಪ್ರಚಾರಪಡಿಸಿ. ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ, ಕಾನೂನಾತ್ಮಕ ಬೆಂಬಲದ ಜತೆಗೆ ಅವರ ಆರ್ಥಿಕ ಮತ್ತು ಸಾಮಾಜಿಕ ಬದುಕಿನ ಸುಧಾರಣೆಗೆ ವಿವಿಧ ಇಲಾಖೆಯ ಯೋಜನೆಗಳಡಿ ಶಿಕ್ಷಣ ಮತ್ತು ಆರ್ಥಿಕ ಯೋಜನೆಗಳ ನೆರವು ಒದಗಿಸುವಂತೆ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ನಾಮನಿರ್ದೇಶಿತ ಅಧಿಕಾರೇತರ ಸದಸ್ಯರಾದ ರಮೇಶ ಆನವಟ್ಟಿ, ಸಿದ್ದಲಿಂಗಪ್ಪ ಹೊನ್ನಪ್ಪ, ಮುತ್ತುರಾಜ ಮಾದರ, ಕೃಷ್ಣಪ್ಪ ಚವ್ಹಾಣ ಅವರು ಜಿಲ್ಲೆಯ ದಲಿತ ಸಮುದಾಯದ ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಪರಿಶಿಷ್ಟ ಸಮುದಾಯದ ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಕಾನೂನಾತ್ಮಕ ರಕ್ಷಣೆ ಹಾಗೂ ಪರಿಹಾರದ ಜತೆಗೆ ದೌರ್ಜನ್ಯ ಎಸಗಿದವರನ್ನು ತ್ವರಿತವಾಗಿ ಬಂಧಿಸಬೇಕು. ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಇತರೆಡೆ ಬಳಸಬಾರದು. ವಿವಿಧ ಇಲಾಖೆಯಲ್ಲಿನ ಯೋಜನೆಗಳ ಮಾಹಿತಿ ಫಲಕವನ್ನು ಆಯಾ ಇಲಾಖಾ ಕಚೇರಿಯಲ್ಲಿ ಪ್ರದರ್ಶಿಸಬೇಕು. ಜಿಲ್ಲಾ ವಾಲ್ಮೀಕಿ ಭವನದ ಮುಂದುವರಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಎಲ್.ಜಿ.ಹಾವನೂರ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸುವಂತೆ ಮನವಿ ಮಾಡಿದರು.
ಕರ್ನಾಟಕ ಅನುಸೂಚಿತ ಜಾತಿ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಯಡಿ ಮಾರ್ಚ್ 2023ರವರೆಗೆ ವಿವಿಧ ಇಲಾಖಾವಾರು ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿದ ಡಿಸಿ, ಅನುದಾನ ಅಪವ್ಯಯವಾಗದ ಇಲಾಖೆಗಳು ಬಾಕಿ ಉಳಿದಿರುವ ಪ್ರಗತಿಯನ್ನು ಪೂರ್ಣಗೊಳಿಸಬೇಕು. ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಪ್ರಗತಿಯ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 1ನೇ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.