ಜಿಲ್ಲೆ

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ 5ರಿಂದ; ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್ ಅವರ ಏಕ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ-2025ಕ್ಕೆ ಸಂಬಂಧಿಸಿದಂತೆ, ಹಾವೇರಿ ಜಿಲ್ಲೆಯಲ್ಲಿ ಮೇ 5ರಿಂದ ಮೂರು ಹಂತದಲ್ಲಿ ಪರಿಶಿಷ್ಟ ಜಾತಿ ಸಮುದಾಯ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸುವ ಸಮೀಕ್ಷೆ ಕಾರ್ಯ ನಡೆಯಲಿದೆ.

ಸಮೀಕ್ಷೆ ಕಾರ್ಯಕ್ಕೆ ಪ್ರತಿ ಮತಗಟ್ಟೆಗೆ ಒಬ್ಬರಂತೆ ಗಣತಿದಾರರು, ಪ್ರತಿ 10ರಿಂದ 12 ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗೆ ಒಬ್ಬರಂತೆ ಗಣತಿದಾರರನ್ನು ನೇಮಿಸಲಾಗಿದೆ.

ಮೇ 5ರಿಂದ ಮೇ 17ರವರೆಗೆ ಮೊದಲ ಹಂತ ಗಣತಿ ಜರುಗಲಿದೆ. ಈ ಅವಧಿಯಲ್ಲಿ ನೇಮಕಗೊಂಡ ಗಣತಿದಾರರು ತಮಗೆ ವಹಿಸಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಸಮುದಾಯಗಳ ಮನೆ ಮನೆಗೆ ತೆರಳಿ ಗಣತಿ ಕಾರ್ಯಕೈಗೊಳ್ಳುವರು. ಮೇ 19ರಿಂದ ಮೇ 21ರವರೆಗೆ ಎರಡನೇ ಹಂತ ಹಾಗೂ ಮೇ 19ರಿಂದ ಮೇ 23ರವರೆಗೆ ಮೂರನೇ ಹಂತದ ಗಣತಿ ಜರುಗಲಿದೆ. ಈ ಸಮಯದಲ್ಲಿ ಸಾರ್ವಜನಿಕರು ಗಣತಿದಾರರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ(ರೇಷನ್ ಕಾರ್ಡ್) ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ ಡಾ.ವಿಜಯಮಹಾಂತೇಶ ದಾನಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧಾರ್ ಕಾರ್ಡ್ ಮಾಡಿಸಿ :

ಪರಿಶಿಷ್ಟ ಜಾತಿಯ ಒಳ ಪಂಗಡಗಳ ಕುರಿತು ಸ್ಪಷ್ಟವಾಗಿ ಗಣತಿದಾರರಿಗೆ ತಿಳಿಸಲು ಕೋರಲಾಗಿದೆ. ಈವರೆಗೆ ಆಧಾರ್ ಕಾರ್ಡ್ ಹೊಂದದೇ ಇರುವ ಪರಿಶಿಷ್ಟ ಜಾತಿ ಸಮುದಾಯದವರು ಗಣತಿ ಕಾರ್ಯ ಮುಕ್ತಾಯ ಆಗುವ ಒಳಗಾಗಿ ಆಧಾರ್ ಕೇಂದ್ರಗಳಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.