ಜಿಲ್ಲೆ

ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾ.3ರಂದು; ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಮಾ.3ರಂದು ಆಯೋಜಿಸಲಾಗಿದೆ. ಸೊನ್ನೆಯಿಂದ ಐದು ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ಹೊರಗುಳಿದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಲಸಿಕಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ವಿಶೇಷವಾಗಿ ಕಾಳಜಿವಹಿಸಿ ಕೊಳಚೆ ಪ್ರದೇಶ, ಹೆಚ್ಚು ಅಪಾಯಕಾರಿ ಪ್ರದೇಶ, ಅನಾಥಾಶ್ರಮ, ವಲಸೆ ಕಾರ್ಮಿಕರ ಮಕ್ಕಳು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದರು.
ಪೋಲಿಯೋ ಕಾರ್ಯಕ್ರಮದ ಕುರಿತು ಶಾಲಾ ಮಕ್ಕಳಿಂದ, ಕಸದ ವಾಹನಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಹೆಸ್ಕಾಂ, ಸ್ಥಳೀಯ ನಗರ ಸಂಸ್ಥೆಗಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಬೆಳಗಾವಿಯ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಾ.ಸಿದ್ದಲಿಂಗಯ್ಯ ಪೋಲಿಯೋ ಕಾರ್ಯಕ್ರಮದ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಆರ್.ಎನ್.ಹಾವನೂರ, ಡಾ.ನೀಲೇಶ ಎಂ.ಎನ್., ಡಾ.ಜಗದೀಶ, ಡಾ.ಎಂ.ವಿರಕ್ತಿಮಠ, ಡಾ.ಸರಿತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
1,004 ಬೂತ್ ಸ್ಥಾಪನೆ
ಜಿಲ್ಲೆಯಲ್ಲಿ 1,70,168 ಸೊನ್ನೆಯಿಂದ ಐದು ವರ್ಷದ ಮಕ್ಕಳನ್ನು ಗುರುತಿಸಲಾಗಿದೆ. ಮಾ.3ರಂದು ಬೂತ್ ಮಟ್ಟದಲ್ಲಿ, ನಂತರ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ಮೂಲಕ ಪೋಲಿಯೋ ಲಸಿಕೆ ಹಾಕಲಾಗುವುದು. ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪಿಎಚ್‌ಸಿ ಸೇರಿದಂತೆ ಒಟ್ಟು 1,004 ಬೂತ್‌ಗಳನ್ನು ಸ್ಥಾಪಿಸಲಾಗಿದೆ. 196 ಸೂಪರ್‌ವೈಸರ್, 254 ಪಿಎಚ್‌ಸಿಒ, 2,008 ವ್ಯಾಕ್ಸಿನೇಟರ್ಸ್‌, 1,438 ಆಶಾ ಹಾಗೂ 1,960 ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಯಾನಂದ ವಿವರಿಸಿದರು.