ಜಿಲ್ಲೆ

ಪಿಎಂ ಫಸಲ್ ಬಿಮಾ ಯೋಜನೆ ಅನುಷ್ಠಾನ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಜ್ಯದಲ್ಲಿ 2024-25ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ಜಿಲ್ಲೆಯ ಎಲ್ಲ ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2024-25ನೇ ಸಾಲಿನಲ್ಲಿ 14 ಬೆಳೆಗಳಾದ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಗೋಧಿ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ), ಕಡಲೆ (ನೀರಾವರಿ), ಉದ್ದು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಕುಸುಬೆ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ) ಮತ್ತು ಟೊಮ್ಯಾಟೊ ಇವುಗಳನ್ನು ಹಿಂಗಾರು ಹಂಗಾಮಿಗೆ ಮತ್ತು 3 ಬೆಳೆಗಳಾದ ಭತ್ತ (ನೀರಾವರಿ), ನೆಲಗಡಲೆ (ಶೇಂಗಾ) (ನೀರಾವರಿ) ಮತ್ತು ಸೂರ್ಯಕಾಂತಿ (ನೀರಾವರಿ) ಇವುಗಳನ್ನು ಬೇಸಿಗೆ ಹಂಗಾಮಿಗೆ ಅಧಿಸೂಚಿಸಲು ಹಾಗೂ ಇವುಗಳಲ್ಲಿ ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ (ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹೊರಗಿರುವ ಮತ್ತು ಪಟ್ಟಣ/ನಗರ ವ್ಯಾಪ್ತಿಗೆ ಸೇರುವ ಗ್ರಾಮಗಳನ್ನು ಸೇರಿಸಿದಂತೆ) ಮತ್ತು ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.

ಹಿಂಗಾರು ಹಂಗಾಮಿನ ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ಈರುಳ್ಳಿ (ನೀರಾವರಿ), ಕುಸುಬೆ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ) ಹಾಗೂ ಟೊಮ್ಯಾಟೊ ಬೆಳೆಗಳಿಗೆ ನವೆಂಬರ್ 30ರೊಳಗಾಗಿ, ಕಡಲೆ (ಮಳೆ ಆಶ್ರಿತ), ಕಡಲೆ (ನೀರಾವರಿ), ಸೂರ್ಯಕಾಂತಿ (ನೀರಾವರಿ) ಹಾಗೂ ಗೋಧಿ (ಮಳೆ ಆಶ್ರಿತ) ಬೆಳೆಗಳಿಗೆ ಡಿ.16ರೊಳಗಾಗಿ ಹಾಗೂ ಉದ್ದು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ) ಹಾಗೂ ಮುಸುಕಿನ ಜೋಳ (ನೀರಾವರಿ) ಬೆಳೆಗೆ ಡಿ.31ರೊಳಗಾಗಿ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಬೇಕು.

ಬೇಸಿಗೆ ಹಂಗಾಮಿಗೆ ಶೇಂಗಾ (ನೀರಾವರಿ), ಭತ್ತ (ನೀರಾವರಿ) ಹಾಗೂ ಸೂರ್ಯಕಾಂತಿ (ನೀರಾವರಿ)ಗಳಿಗೆ 2025ರ ಫೆ.28ರಂದು ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಬೇಕು.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಕಂದಾಯ ರಶೀದಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕು. ವಿಮೆ ನೋಂದಣಿ ಮಾಡುವ ಎಲ್ಲ ರೈತರು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಕೋರಲಾಗಿದೆ.

ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಬ್ಯಾಂಕುಗಳ ಮೂಲಕವೇ ಅಂದರೆ, ವಾಣಿಜ್ಯ ಬ್ಯಾಂಕುಗಳು, ಪ್ರಾಂತೀಯ ಗ್ರಾಮೀಣ ಬ್ಯಾಂಕುಗಳು, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ನೋಂದಾಯಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.