ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಆಯ್ದ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆ ಹಾಗೂ ಮಾರ್ಗಸೂಚಿ ಅನ್ವಯ ಗುಣಮಟ್ಟದ ಶೇಂಗಾ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಶೇಂಗಾ ಖರೀದಿ ಕೇಂದ್ರಗಳನ್ನು ಸವಣೂರ ಹಾಗೂ ರಾಣೆಬೆನ್ನೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲ್ಲಿ ತೆರೆಯಲು ಸೂಚನೆ ನೀಡಿದರು. ಬೆಂಬಲ ಬೆಲೆಯಡಿ ಶೇಂಗಾವನ್ನು ಪ್ರತಿ ರೈತರಿಂದ ಶೇಂಗಾ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ ಮೂರು ಕ್ವಿಂಟಲ್‌ನಂತೆ ಹಾಗೂ ಪ್ರತಿಯೊಬ್ಬ ರೈತರಿಂದ 15 ಕ್ವಿಂಟಲ್ ಖರೀದಿಗೆ ಅವಕಾಶವಿದೆ. ಶೇಂಗಾ ಖರೀದಿ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಜಿಲ್ಲೆಯಲ್ಲಿ 2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 52 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್., ಸಹಕಾರಿ ಸಂಘಗಳ ಉಪನಿಬಂಧಕ ಅಜ್ಮತ್‌ವುಲ್ಲಾಖಾನ್, ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿಯ ಅಧಿಕಾರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಕ್ವಿಂಟಲ್‌ಗೆ 6,377 ರೂ.
ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಪ್ರತಿ ಕ್ವಿಂಟ್‌ಗೆ 6,377 ರೂ.ನಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಜುಲೈ 21ರಿಂದ 45 ದಿನಗಳವರೆಗೆ ರೈತರ ನೋಂದಣಿ ಆರಂಭಿಸಿ, 90 ದಿನಗಳವರೆಗೆ ಖರೀದಿ ಕಾರ್ಯಕೈಗೊಳ್ಳಲು ನಾಫೆಡ್ ಸಂಸ್ಥೆ ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯಾಗಿದೆ. ಹಾಗೂ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿಯ ಮೂಲಕ ಶೇಂಗಾ ಖರೀದಿಗೆ ಕ್ರಮವಹಿಸುವಂತೆ ಡಿಸಿ ಸೂಚನೆ ನೀಡಿದರು.