ಜಿಲ್ಲೆ

ಗುತ್ತಲ ಠಾಣೆ ಪೊಲೀಸರಿಂದ ಕಿರುಕುಳ ಆರೋಪ; ಮಾಜಿ ಸೈನಿಕರ ಪ್ರತಿಭಟನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕಿನ ಗುತ್ತಲ ಪೊಲೀಸ್ ಠಾಣೆಯವರು ಮಾಜಿ ಸೈನಿಕ ಬಸಲಿಂಗಪ್ಪ ಮುಂಡರಗಿ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಮಾಜಿ ಸೈನಿಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಸಹೋದರಿಯ ಮಗಳನ್ನು ಹಾವೇರಿ ತಾಲೂಕಿನ ತಿಮ್ಮನಹಳ್ಳಿಯ ಯುವಕನೊಬ್ಬನಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ವರ್ಷ ಆಕೆಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಈ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಇದೇ ವಿಚಾರವಾಗಿ ನನ್ನ ಹಾಗೂ ಕುಟುಂಬದವರ ಮೇಲೆ ಹಲ್ಲೆ ಮಾಡಿ, ನನ್ನ ವಿರುದ್ಧವೇ ಗುತ್ತಲ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಗುತ್ತಲ ಠಾಣೆಯ ಪೇದೆ ಎಚ್.ಸಿ. ರಾಮನಗೌಡರ ಕೊಲೆ ಆರೋಪಿಗಳ ಸಂಬಂಧಿಯಾಗಿದ್ದು, ಆತನ ಪ್ರಚೋದನೆ ಮೇರೆಗೆ ಪಿಎಸ್‌ಐ ಜಗದೀಶ ಹಲವು ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಬಸಲಿಂಗಪ್ಪ ಆರೋಪಿಸಿದ್ದಾರೆ. ‘ಎಲ್ಲವನ್ನೂ ದಾಖಲೆ ಸಮೇತ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಇದು ಸುಳ್ಳು ಆರೋಪ’ ಎಂದು ಪಿಎಸ್‌ಐ ಜಗದೀಶ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ, ರಜನಿ ಸುಬ್ಬಯ್ಯ, ನಿಂಗಪ್ಪ ಸಿಂಗೋಟಿ, ಮಂಜುನಾಥ, ವೇಣು ಸೇರಿದಂತೆ ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ವಿಜಯನಗರ, ಕೋಲಾರ, ಇತರ ಜಿಲ್ಲೆಗಳ ಮಾಜಿ ಸೈನಿಕರು ಪಾಲ್ಗೊಂಡಿದ್ದರು.
ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ
ಅನ್ಯಾಯಕ್ಕೊಳಗಾದ ಮಾಜಿ ಸೈನಿಕ ಬಸಲಿಂಗಪ್ಪ ಪರವಾಗಿ ಪ್ರತಿಭಟಿಸಲು ಮುಂದಾದರೆ ಪ್ರತಿಭಟನೆ ಹತ್ತಿಕ್ಕಲು ಅಧಿಕಾರಿಗಳು ಮುಂದಾಗಿದ್ದಾರೆ. ‘ಪ್ರತಿಭಟನೆ ವೇಳೆ ಅನ್ಯಾಯಕ್ಕೊಳಗಾದ ಮಾಜಿ ಸೈನಿಕ ವಿಷ ಸೇವಿಸುವ ಕುರಿತು ಗುಪ್ತಚರ ಮಾಹಿತಿ ತಿಳಿದು ಬಂದಿದೆ. ಇದರಿಂದ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ, ಪ್ರತಿಭಟನೆ ಮಾಡಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹಾವೇರಿ ತಹಶೀಲ್ದಾರ್ ಮಾಜಿ ಸೈನಿಕರ ಸಂಘಕ್ಕೆ ಪತ್ರದ ಮುಖೇನ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರೂ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಅಧಿಕಾರಿಗಳ ಈ ನಡೆ ಎಷ್ಟರ ಮಟ್ಟಿಗೆ ಸರಿ ಎಂದು ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಆರೋಪಿಸಿದರು.