ಜಿಲ್ಲೆ

ಪರಿಹಾರಕ್ಕಾಗಿ ಗರ್ಭಕೋಶ ಸಂತ್ರಸ್ತೆಯರ ಆಕ್ರೋಶ; ಸೀರೆ ಬಿಚ್ಚಿ ಪ್ರತಿಭಟಿಸುವ ಎಚ್ಚರಿಕೆ; ಡಿಸಿ ಕಚೇರಿ ಎದುರು ನೆಲಕ್ಕೆ ಬಿದ್ದು ರೋದಿಸಿದ ಮಹಿಳೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಡಾ.ಶಾಂತಾ ಎಂಬ ವೈದ್ಯನ ನಿರ್ಲಕ್ಷ್ಯದಿಂದ ಗರ್ಭಕೋಶ ಕಳೆದುಕೊಂಡ ರಾಣೆಬೆನ್ನೂರ ತಾಲೂಕಿನ ಲಂಬಾಣಿ ಸಮುದಾಯದ ನೂರಾರು ಮಹಿಳೆಯರು ಪರಿಹಾರಕ್ಕೆ ಆಗ್ರಹಿಸಿ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಅತ್ತ ಕೆಡಿಪಿ ಸಭೆ ನಡೆಯುತ್ತಿದ್ದರೆ, ಇತ್ತ ಸಂತ್ರಸ್ತೆಯರು ಪ್ರತಿಭಟನೆಗೆ ಇಳಿದು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು.
ಡಾ.ಶಾಂತಾ ಎಂಬ ವೈದ್ಯ ಸರ್ಕಾರಿ ಹಣಕ್ಕಾಗಿ 1,522 ಮಹಿಳೆಯರ ಗರ್ಭ ಕತ್ತರಿಸಿ, ನಮಗೆ ಅನ್ಯಾಯ ಮಾಡಿದ್ದಾನೆ. ಇಷ್ಟು ದಿನ ಕಾದು ಸಾಕಾಗಿದೆ. ಈ ಕೂಡಲೇ ನಮಗೆ ನ್ಯಾಯ ಮತ್ತು ಪರಿಹಾರ ಬೇಕು. ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಅವರೇ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಮ್ಮನ್ನು ಬಂಧಿಸಿ, ಇಲ್ಲವೇ ಸಚಿವರನ್ನು ಭೇಟಿ ಮಾಡಿಸಿ. ಇಲ್ಲದಿದ್ದಲ್ಲಿ ನಾವು ಸೀರೆ ಬಿಚ್ಚಿ, ಅರೆಬೆತ್ತಲೆ ಪ್ರತಿಭಟನೆ ಮಾಡುತ್ತೇವೆ ಎಂದು ಸಂತ್ರಸ್ತೆಯರು ಎಚ್ಚರಿಕೆ ನೀಡಿದರು.
ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದು, ಒಂದು ಹಂತದಲ್ಲಿ ಕೆಲವರು ಕೈಯಲ್ಲಿ ಕಲ್ಲು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಓರ್ವ ಮಹಿಳೆ ಬಟ್ಟೆ ಕಳಚಲು ಯತ್ನಿಸಿದರು. ನೆಲಕ್ಕೆ ಬಿದ್ದು ರೋದಿಸಿದರು.
ಪ್ರತಿಭಟನೆ ವಿಷಯ ತಿಳಿದು ರಾಣೆಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನಮೂರ್ತಿ ಸ್ಥಳಕ್ಕಾಗಮಿಸಿ ಮನವಿ ಆಲಿಸಿದರು. ಆದರೂ ಮಹಿಳೆಯರ ಪಟ್ಟಿಗೆ ಬೆಂಡಾದ ಪೊಲೀಸರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದರು. ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ, ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು. ನಂತರವಷ್ಟೇ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಲಲಿತಾ ಲಮಾಣಿ, ಶೈಲಾ ರಂಗರಡ್ಡಿ, ಮಂಜುಳಾ ಲಮಾಣಿ, ಯಲ್ಲವ್ವ ಲಮಾಣಿ, ಅನಸೂಯಾ, ದುರುಗವ್ವ, ಲಕ್ಷ್ಮವ್ವ, ಪೀರವ್ವ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
9 ವರ್ಷಗಳ ಹೋರಾಟ
ವೈದ್ಯನೊಬ್ಬನ ಕುತಂತ್ರದಿಂದ ಅನಧಿಕೃತವಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ನೂರಾರು ಮಹಿಳೆಯರು ರಾಣೆಬೆನ್ನೂರ ತಾಲೂಕಿನಲ್ಲಿ ಇದ್ದಾರೆ. ಈ ಚಿಕಿತ್ಸೆಯಂದ ದುಡಿದುಕೊಂಡು ತಿನ್ನಲು ಆಗುತ್ತಿಲ್ಲ, ಕಳೆದ 9 ವರ್ಷಗಳಿಂದ ಈ ಕುರಿತು ಹೋರಾಟ ಮಾಡುತ್ತಿದ್ದರೂ ಯಾವ ಸರ್ಕಾರಗಳೂ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಬೇಟಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಸಂತ್ರಸ್ತೆ ಲಲಿತಮ್ಮ ಲಮಾಣಿ ಅಸಮಾಧಾನ ಹೊರಹಾಕಿದರು.
ರೇಣುಕಾಸ್ವಾಮಿಗೆ ಪರಿಹಾರ, ನಮಗೇಕಿಲ್ಲ ?
ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿಗೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ, ನಮಗೆ ಏಕೆ ಪರಿಹಾರ ಕೊಡುವುದಿಲ್ಲ. ಈಗಾಗಲೇ ಆರು ಸಂತ್ರಸ್ತೆಯರು ನಿಧನರಾಗಿದ್ದಾರೆ. ಹಲವರಿಗೆ ಕಣ್ಣು, ಕೈಕಾಳು ಸರಿಯಾಗಿಲ್ಲ. ಇದಕ್ಕೆ ಅನಧಿಕೃತ ಗರ್ಭಕೋಶ ಚಿಕಿತ್ಸೆಯೇ ಕಾರಣ. ಎಲ್ಲರಿಗೂ ಪರಿಹಾರ ಕೊಡುತ್ತಾರೆ. ನಮಗೇಕೆ ಕೊಡುವುದಿಲ್ಲ ಎಂದು ಸಂತ್ರಸ್ತೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.