ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಜೋಳ ಮತ್ತು ರಾಗಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಆಯ್ದ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಂಬಲ ಬೆಲೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಹಾಗೂ ಮಾರ್ಗಸೂಚಿ ಅನ್ವಯ ಎಫ್.ಎ.ಕ್ಯೂ ಗುಣಮಟ್ಟ ಹೊಂದಿದ ಜೋಳ ಹಾಗೂ ರಾಗಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರ ನಿಗದಿಪಡಿಸಿದಂತೆ ಬಿಳಿಜೋಳ-ಹೈಬ್ರೀಡ್ ಪ್ರತಿ ಕ್ವಿಂಟಲ್‌ಗೆ 3,180 ರೂ. ಹಾಗೂ ಬಿಳಿಜೋಳ ಮಾಲ್ದಂಡಿ 3,225 ರೂ. ಹಾಗೂ ರಾಗಿ 3,846 ರೂ.ನಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಡಿ.1ರಿಂದ ರೈತರ ನೋಂದಣಿ ಆರಂಭಿಸಬೇಕು. ಜನವರಿ 1ರಿಂದ ಮಾರ್ಚ್ 31ರವರೆಗೆ ರಾಜ್ಯ ಸಹಕಾರಿ ಮಾರಾಟ ಮಂಡಳಿ ನಿಯಮಿತ ಸಂಸ್ಥೆಯ ಮೂಲಕ ರಾಗಿ ಮತ್ತು ಜೋಳ ಖರೀದಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಖರೀದಿ ಕೇಂದ್ರ: ಜೋಳ ಖರೀದಿ ಕೇಂದ್ರಗಳನ್ನು ಶಿಗ್ಗಾಂವಿ, ರಾಣೆಬೆನ್ನೂರ ಮತ್ತು ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲ್ಲಿ ಹಾಗೂ ರಾಗಿ ಖರೀದಿ ಕೇಂದ್ರಗಳನ್ನು ಬ್ಯಾಡಗಿ ಮತ್ತು ಹಿರೇಕೆರೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲ್ಲಿ ತೆರೆಯಲು ಸೂಚನೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಂ.ಕಬ್ಬೇರಹಳ್ಳಿ ಮಾತನಾಡಿ, ಬೆಂಬಲ ಬೆಲೆಯಡಿ ಜೋಳ ಮತ್ತು ರಾಗಿಯನ್ನು ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಖರೀದಿಗೆ ಅವಕಾಶವಿದೆ. ರೈತರಿಂದ ಖರೀದಿಸಿದ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 123 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಹಾಗೂ 19 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್., ಸಹಕಾರಿ ಸಂಘಗಳ ಉಪನಿಬಂಧಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.