ಹಾವೇರಿ: ಯೋಗವು ಕೇವಲ ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲದೆ ಸಮಾಜದ ಅರೋಗ್ಯಕ್ಕೂ ಮುಖ್ಯವಾಗಿದೆ. ಯೋಗ ಎಂದರೆ ಕೇವಲ ವ್ಯಾಯಾಮ ಅಲ್ಲ. ಅದು ಆರೋಗ್ಯಕರ ಅಭ್ಯಾಸವಾಗಿದ್ದು, ಮಾನವನ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಕೆಲಸ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ರಜನಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ಆರೋಗ್ಯ ಮತ್ತು ಪರಿಸರ ಸಮತೋಲನೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜೂ.21ರಂದು ವಿಶ್ವಾದ್ಯಾಂತ ಯೋಗ ದಿನಾಚರಣೆಯನ್ನು ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಆಸ್ತಿ ಇದ್ದವರು ಮಾತ್ರ ಶ್ರೀಮಂತರಲ್ಲ. ಉತ್ತಮ ಆರೋಗ್ಯ ಹೊಂದಿದವರು ನಿಜವಾದ ಶ್ರೀಮಂತರು, ಜೀವನದಲ್ಲಿ ಕೇವಲ ಆಸ್ತಿ ಮುಖ್ಯವಲ್ಲ ಆಸ್ತಿ ಜತೆಗೆ ನಮಗೆ ಬೇಕಾಗಿರುವುದು ಒಳ್ಳೆಯ ಆರೋಗ್ಯ ಮತ್ತು ಯೋಗಕ್ಷೇಮ ಜೀವನದ ಸಂತೋಷಕ್ಕೆ ಯೋಗ ಮುಖ್ಯ ಅಂಶವಾಗಿದೆ ಎಂದರು.
ಆತ್ಮ ಶುದ್ಧಿಯ ಸಾಧನೆಗಾಗಿ ಮಹರ್ಷಿ ಪತಂಜಲಿ ಎಂಟು ಸೂತ್ರಗಳನ್ನು ನೀಡಿದ್ದಾರೆ. ನಾವು ಅವುಗಳನ್ನು ಎಂಟು ಅಂಗಾಂಗ ಎಂದು ಕರೆಯುತ್ತೇವೆ ಅವುಗಳು ಯಮ, ನಿಯಮ, ಆತ್ಮ, ಪ್ರಾಣಾಯಾಮ, ಪ್ರತ್ಯಾಹಾರ, ಏಕಾಗ್ರತೆ, ಧ್ಯಾನ, ಸಮಾಧಿ ಈ ಎಲ್ಲ ಅಂಗಾಂಗಗಳನ್ನು ಅಭ್ಯಾಸ ಮಾಡುವುದರ ಮೂಲಕ ಸ್ವಯಂ ಸಾಕ್ಷಾತ್ಕಾರ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ಹಾಗೆಯೇ ವೈಯಕ್ತಿಕ ಪರಿವರ್ತನೆ ಮತ್ತು ಮಾನಸಿಕ ಪರಿವರ್ತನೆ ಆಗಲಿಕ್ಕೆ ಈ ಎಂಟು ಅಂಗಾಂಗಗಳು ಕಾರಣವಾಗುತ್ತವೆ. ಕೇವಲ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಯೋಗವು ಮಾನವ ಸಂಕುಲಕ್ಕೆ ಮತ್ತು ಪ್ರಾಚೀನ ಭಾರತಕ್ಕೆ ಒಂದು ಭವ್ಯ ಕೊಡುಗೆ ನೀಡಿದೆ. ಇವತ್ತಿನ ವೈವಿದ್ಯಮಯ ಜೀವನದಲ್ಲಿ ಸೌಹಾರ್ದತೆಯನ್ನು ಮೂಡಿಸಲು ಯೋಗವು ತುಂಬಾನೇ ಮಹತ್ವದಾಯಕವಾಗಿದೆ. ಈ ನಿಟ್ಟಿನಲ್ಲಿ ಜೂ.21ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲ್ಪಡುತ್ತದೆ. ಅಂತಾರಾಷ್ಟ್ರೀಯ ಮಟ್ಟದವರೆಗೂ ಇಂದು ಯೋಗ ಪಸರಿಸಿದೆ ಎಂದರು.
ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಯೋಗದಿಂದ ಮನಸ್ಸು ಮತ್ತು ದೇಹವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮಾಡಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ.ಎಲ್ ನಾಗರಾಜ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾ ತೇನಹಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ.ಸಿ ನಿಡಗುಂದಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್., ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.