ಜಿಲ್ಲೆ

ಕಟ್ಟುನಿಟ್ಟಿನ ಚುನಾವಣೆಗೆ ಜಿಲ್ಲಾಡಳಿತ ತಯಾರಿ; ಜಿಲ್ಲೆಯಲ್ಲಿ ಶನಿವಾರದಿಂದಲೇ ನೀತಿ ಸಂಹಿತೆ ಜಾರಿ; ಏ.12ರಿಂದ ನಾಮಪತ್ರ ಸಲ್ಲಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹದಿನೆಂಟನೇ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಮಾರ್ಚ್ 16ರ ಸಂಜೆಯಿಂದಲೇ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಮತದಾನ ಮೇ 7ರಂದು ನಡೆಯಲಿದ್ದು, ಮತ ಎಣಿಕೆ ಕಾರ್ಯ ಜೂನ್ 4ರಂದು ನಡೆಯಲಿದೆ. ಚುನಾವಣೆಯನ್ನು ಕಟ್ಟುನಿಟ್ಟಾಗಿ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹಾವೇರಿ ಲೋಕಸಭಾ ಕ್ಷೇತ್ರ ಒಳಗೊಂಡಿದೆ. ಏ.12ರಿಂದ ಹಾವೇರಿ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಹಾವೇರಿ ಲೋಕಸಭಾ ಚುನಾವಣೆ ಮೂರನೇ ಹಂತದಲ್ಲಿ ನಡೆಯಲಿದೆ. ಏ.12ರಂದು ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದರು.
ಮತಯಂತ್ರ ವಿವರ:
3,746 ಬ್ಯಾಲೆಟ್ ಯುನಿಟ್, 2497 ಕಂಟ್ರೋಲ್ ಯುನಿಟ್ ಹಾಗೂ 2,630 ವಿವಿಪ್ಯಾಟ್ ಯಂತ್ರಗಳ ಲಭ್ಯವಿದೆ. ಮೊದಲ ಹಂತದ ತಪಾಸಣೆ ಕಾರ್ಯ ನಡೆಸಲಾಗಿದೆ. ಕ್ಷೇತ್ರವಾರು ಮೊದಲ ಹಂತದ ರ‌್ಯಾಂಡಮೈಜೇಷನ್ ಮಾಡಲಾಗಿದೆ.
1,982 ಮತಗಟ್ಟೆ :
ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ( ಹಾವೇರಿ-ಗದಗ ಜಿಲ್ಲೆ) 1,371, ಸ್ಥಳಗಳಲ್ಲಿ 1,982 ಮತಗಟ್ಟೆಗಳನ್ನು ತೆರೆಯಲಾಗುವುದು. 39 ದುರ್ಬಲ ಹಾಗೂ 370 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಶಿರಹಟ್ಟಿ ಕ್ಷೇತ್ರದಲ್ಲಿ 251, ಗದಗ ಕ್ಷೇತ್ರದಲ್ಲಿ 223, ರೋಣ ಕ್ಷೇತ್ರದಲ್ಲಿ 267, ಹಾನಗಲ್ಲ ಕ್ಷೇತ್ರದಲ್ಲಿ 243, ಹಾವೇರಿ ಕ್ಷೇತ್ರದಲ್ಲಿ 261, ಬ್ಯಾಡಗಿ ಕ್ಷೇತ್ರದಲ್ಲಿ 242, ಹಿರೇಕೆರೂರ ಕ್ಷೇತ್ರದಲ್ಲಿ 229 ಹಾಗೂ ರಾಣೇಬೆನ್ನೂರ ಕ್ಷೇತ್ರದಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಲೈಟಿಂಗ್, ಶೌಚಗೃಹ, ಪಿಠೋಪಕರಣ, ರ‌್ಯಾಂಪ್, ಶೆಲ್ಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಡಿಸಿ ಹೇಳಿದರು.
28 ಚೆಕ್‌ಪೋಸ್ಟ್ :
ಹಾವೇರಿ ಜಿಲ್ಲೆಯಲ್ಲಿ 18 ಹಾಗೂ ಗದಗ ಜಿಲ್ಲೆಯಲ್ಲಿ 10 ಸೇರಿ ಒಟ್ಟು 28 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಲಿದೆ. ಪ್ರತಿ ಚೆಕ್ ಪೋಸ್ಟ್‌ನಲ್ಲಿ ವೆಬ್‌ಕ್ಯಾಮರಾ ಅಳವಡಿಸಿದ್ದು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗುವುದು ಎಂದು ಹೇಳಿದರು.
1950 ಸಹಾಯವಾಣಿ
ಚುನಾವಣಾ ದೂರು ನಿರ್ವಹಣೆಗೆ ಟೋಲ್ ಫ್ರೀ ಸಹಾಯವಾಣಿ 1950 ಸ್ಥಾಪಿಸಲಾಗಿದೆ. ಗದಗ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ 08372-239177 ಹಾಗೂ 08375-200965 ಮತ್ತು ವಿಧಾನಸಭೆ ಕ್ಷೇತ್ರವಾರು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಉಪಸ್ಥಿತರಿದ್ದರು.

ಸಾಮಾನ್ಯ ವರ್ಗಕ್ಕೆ ಮೀಸಲು
ಹಾವೇರಿ ಲೋಕಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹಾವೇರಿ ಜಿಲ್ಲೆಯ ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ, ಹಾನಗಲ್ಲ ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ, ಗದಗ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಹಾವೇರಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲೇ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಬೇಕು ಎಂದು ಡಿಸಿ ತಿಳಿಸಿದರು.