ಜಿಲ್ಲೆ

ಪೋಷಣ ಮಾಸಾಚರಣೆ ಕಾರ್ಯಕ್ರಮಕ್ಕೆ ಡಿಸಿ ಚಾಲನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದೇವಗಿರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪೋಷಣ ಮಾಸಾಚರಣೆ ಅಂಗವಾಗಿ ತಾಯಿ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಇಲ್ಲಿನ ದೇವಗಿರಿ ಅಂಗನವಾಡಿ ಕೇಂದ್ರ ಸಂಖ್ಯೆ 257ರ ಆವರಣದಲ್ಲಿ ಶನಿವಾರ ಪೇರಲ ಹಣ್ಣಿನ ಸಸಿ ನೆಡುವ ಮೂಲಕ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.
ನಂತರ ಅಂಗನವಾಡಿ ಕೇಂದ್ರದ ಅಡುಗೆ ಕೊಣೆ, ಆಹಾರ ದಾಸ್ತಾನು ಕೊಠಡಿ, ಶೌಚಗೃಹ, ನೀರಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಬೆಲ್ಲ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳ ಗುಣಮಟ್ಟದ ಕುರಿತು ಮಕ್ಕಳ ಪಾಲಕರಿಂದ ಮಾಹಿತಿ ಪಡೆದುಕೊಂಡರು. ಮಿಲೆಟ್ ಲಾಡು ತಿಂದು ರುಚಿ ಪರಿಶೀಲಿಸಿದರು. ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ಗ್ರಾಮದ ಎಲ್ಲ ಮಕ್ಕಳು ಶಾಲೆಗಳಿಗೆ ಹೋಗುವಂತೆ ನೋಡಿಕೊಳ್ಳಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂದು ಸೂಚಿಸಿದರು.
ಅಂಗನವಾಡಿ ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ಪ್ರತಿ ಮಗುವಿನ ಮಾಹಿತಿ ಅಪ್‌ಡೆಟ್ ಇದೆಯಾ ಎಂದು ಪ್ರಶ್ನಿಸಿದರು. ಎಲ್ಲ ಮಕ್ಕಳ ಆಧಾರ್‌ಕಾರ್ಡ್ ಮಾಡಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು. ಜಲಜೀವನ ಮಿಷನ್ ಯೋಜನೆಯಡಿ ಎಲ್ಲ ಅಂಗನವಾಡಿ ಹಾಗೂ ಶಾಲೆಗಳಿಗೆ ನೀರಿನ ಸೌಲಭ್ಯ ನೀಡಲು ಆದ್ಯತೆ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಂಗನವಾಡಿ ಕೇಂದ್ರದ ಆವರಣದಲ್ಲಿರುವ ಸಿ.ಎಸ್.ಸಿ. ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ನೀಡುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಗೃಹಲಕ್ಷ್ಮೀ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆಯಾ ಎಂದು ಮಹಿಳೆಯರನ್ನು ವಿಚಾರಿಸಿದಾಗ, ಹಣ ಜಮೆಯಾಗುತ್ತಿದೆ ಎಂದರು.
ಪೋಷಣ ಮಾಸಾಚರಣೆ ಅಂಗವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಇಂದಿನಿಂದ ಸೆ.30ರವರೆಗೆ ಒಂದು ತಿಂಗಳು ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ನಿರೂಪಣಾಧಿಕಾರಿ ಶೈಲಾ ಕುರುಹಟ್ಟಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಪಾರಿಗಂಟಿ, ಗ್ರಾ.ಪಂ.ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆದಲರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಐ.ಎ.ತಹಶೀಲ್ದಾರ, ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮೆಚ್ಚುಗೆ:
ಡಿಜಿಟಲ್ ಅಂಗನವಾಡಿ ಕೇಂದ್ರದಲ್ಲಿ ಅಳವಡಿಸಲಾದ ಮಕ್ಕಳ ಆಟಿಕೆ, ಗೋಡೆ ಬರಹ, ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರ ಮುಖ್ಯವಾಗಿದ್ದು, ಎಲ್ಲರ ಸಹಕಾರ ಹೀಗೆ ಇರಲಿ ಎಂದರು.
ಡಿಜಿಟಲ್: ಎಂಟು ಅಂಗನವಾಡಿ ಕೇಂದ್ರಗಳನ್ನು ಡಿಜಿಟಲ್ ಮಾಡಲಾಗಿದೆ ಹಾಗೂ ಡಿಜಿಟಲ್ ಗ್ರಂಥಾಲಯ ಮಾಡಲಾಗಿದೆ. ಗ್ರಂಥಾಲಯದಲ್ಲಿ ಎಂಟು ಕಂಪ್ಯೂಟರ್‌ಗಳಿದ್ದು, 35 ಆಸನದ ವ್ಯವಸ್ಥೆ ಇದ್ದು, ಮಕ್ಕಳಿಗೆ ಹಾಗೂ ವಯಸ್ಕರರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿತಾ ವಿವರಿಸಿದರು.