ಜಿಲ್ಲೆ

ಹತ್ತು ವರ್ಷ ಪೂರೈಸಿದ ಆಧಾರ್ ಕಾರ್ಡ್ ನವೀಕರಿಸಿ; ಜಿಲ್ಲಾಧಿಕಾರಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯ ಗೊಳಿಸಿರುವುದರಿಂದ ನಾಗರಿಕರು ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿ 10 ವರ್ಷ ಮೇಲ್ಪಟ್ಟ ನಾಗರಿಕರು ಆಧಾರ್ ನೋಂದಣಿ ಸಮಯದಲ್ಲಿ ನಮೂದಿಸಿದ ವಿಳಾಸದಲ್ಲಿ ಈಗಲೂ ಇದ್ದರೂ ಕೂಡ ಅಂತಹ ಆಧಾರ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳುತ್ತಿವೆ. ಹಾಗಾಗಿ, 10 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ್ ಹೊಂದಿದವರು ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ್ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಯುಐಡಿಎಐ ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ್ಯ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಐದು ವರ್ಷ ಮೇಲ್ಪಟ್ಟ ಏಳು ವರ್ಷದ ಒಳಗಿನ ಎಲ್ಲ ಮಕ್ಕಳ ಬಯೋಮೆಟ್ರಿಕ್ ಮತ್ತು ಮೊಬೈಲ್ ನಂಬರ್ ಅನ್ನು ನವೀಕರಣಗೊಳಿಸಬೇಕು. ಹೊಸ ನೋಂದಣಿ ಹಾಗೂ ಐದು ವರ್ಷ ಮೇಲ್ಪಟ್ಟ ಏಳು ವರ್ಷದೊಳಗಿನ ಎಲ್ಲ ಮಕ್ಕಳ ಬಯೋಮೆಟ್ರಿಕ್ ನವೀಕರಣ ಉಚಿತವಾಗಿತ್ತದೆ.
ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್ ನಂಬರ್‌ಗಳ ವಿವರ ನವೀಕರಣಕ್ಕೆ 50 ರೂ. ಶುಲ್ಕವಿದೆ. ಕಣ್ಣು, ಮುಖ, ಕೈ ಬೆರಳುಗಳ ವಿವರಗಳ (ಬಯೋಮೆಟ್ರಿಕ್) ನವೀಕರಣಕ್ಕೆ 100 ರೂ. ಶುಲ್ಕವಿದೆ. ಆಧಾರ್ ನೋಂದಣಿ ಮಾಡಿಸಿದ ನಂತರ ಸ್ವೀಕೃತಿಯಲ್ಲಿ ನಮೂದಿಸಿರುವ ಶುಲ್ಕವನ್ನು ಮಾತ್ರ ಪಾವತಿಸಬೇಕು ಹಾಗೂ ಪೂರ್ಣ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು. ಜಿಲ್ಲೆಯ ನಾಗರೀಕರು ಆಧಾರ್ ಹೊಸ ನೋಂದಣಿ ಹಾಗೂ ನವೀಕರಣಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿ ತಿಳಿಸಿದ್ದಾರೆ.