ಜಿಲ್ಲೆ

ರಾಣೆಬೆನ್ನೂರ ಚೌಡೇಶ್ವರಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗಟ್ಟಿ; ಜಿಲ್ಲಾಡಳಿತಕ್ಕೆ ದಯಾನಂದ ಸ್ವಾಮೀಜಿ ಒತ್ತಾಯ

ಹಾವೇರಿ: ರಾಣೆಬೆನ್ನೂರ ನಗರದಲ್ಲಿ ಜ.12ರಿಂದ 18ರವರೆಗೆ ಗಂಗಾಜಲ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ನಡೆಯುವ ಪ್ರಾಣಿ ಬಲಿ ತಡೆಯಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರಿನ ಗಂಗಾಜಲ ಶ್ರೀ ಚೌಡೇಶ್ವರಿದೇವಿ ಜಾತ್ರೆಯ ಸಂದರ್ಭದಲ್ಲಿ ಪ್ರತಿವರ್ಷ ದೇವರ ಹೆಸರಲ್ಲಿ ಸಾವಿವಾರು ಸಂಖ್ಯೆಯಲ್ಲಿ ಪ್ರಾಣಿಬಲಿ ಕೊಡುತ್ತಿರುವ ಮಾಹಿತಿ ಇದೆ. ಇದು ಶಿಕ್ಷಾರ್ಹ ಅಪರಾಧ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಜಾತ್ರೆ ಮೊದಲೇ ಜನಜಾಗೃತಿ ಮೂಡಿಸಬೇಕು. ದೇವರ ಹೆಸರಲ್ಲಿ ಹರಕೆ ಹೊತ್ತು ಪ್ರಾಣಿಬಲಿ ನೀಡುವ ಬದಲು ಜೀವರಕ್ಷಾತ್ಮಕ ಹರಕೆ ಹೊರಬೇಕು. ಧರ್ಮ ಹಾಗೂ ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದು ಕೊನೆಯಾಗಬೇಕು ಎಂದರು.

ದೇವಾಲಯಗಳ ಆವರಣದಲ್ಲಿ ಪ್ರಾಣಿಗಳನ್ನು ಬಲಿಕೊಟ್ಟು ಪವಿತ್ರ ಸ್ಥಳಗಳನ್ನು ಕಸಾಯಿಖಾನೆಗಳಾಗಿ ಮಾಡಬೇಡಿ. ದೇವಾಲಯಗಳು ವಧಾಲಯಗಳಾಗದೇ, ದಿವ್ಯಾಲಯಯಗಳಾಗಬೇಕು. ದೇವರ ಹೆಸರಿನಲ್ಲಿ ದೇವಸ್ಥಾನದ ಆವರಣ, ಸುತ್ತಮುತ್ತ, ರಸ್ತೆಗಳಲ್ಲಿ ಕೋಣ, ಕುರಿ, ಆಡು, ಕೋಳಿ ಇತರ ಪ್ರಾಣಿಗಳನ್ನು ಬಲಿ ಕೊಡುವುದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದರು.

ಈ ಕುರಿತು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಜಿಲ್ಲೆಯ ಅಧಿಕಾರಿಗಳ ವಿರುದ್ಧ ಕಾನೂನು ಉಲ್ಲಂಘನೆ ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದ ಅಡಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

1.5 ಕೋಟಿ ಪ್ರಾಣಿಗಳ ಕೊಲೆ

1959ರಲ್ಲಿಯೇ ಕರ್ನಾಟಕವನ್ನು ಪ್ರಾಣಿಬಲಿ ಮುಕ್ತ ರಾಜ್ಯವೆಂದು ಘೋಷಣೆ ಮಾಡಲಾಗಿದೆ. ಆದರೂ ಸರ್ಕಾರದ ವ್ಯಾಪ್ತಿಯ ದೇವಸ್ಥಾನಗಳಲ್ಲಿಯೇ ಪ್ರಾಣಿಬಲಿ ನಡೆಯುತ್ತಿರುವುದು ದುರಂತದ ಸಂಗತಿ. ಸರ್ಕಾರದ ವ್ಯಾಪ್ತಿಯ 36 ಸಾವಿರ ಹಾಗೂ 2 ಲಕ್ಷ ಖಾಸಗಿ ದೇವಸ್ಥಾನಗಳಲ್ಲಿ ಪ್ರತಿವರ್ಷ 1.5 ಕೋಟಿ ಪ್ರಾಣಿಗಳ ಕಗ್ಗೊಲೆ ನಡೆಯುತ್ತಿದೆ ಎಂದು ದಯಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.