ಜಿಲ್ಲೆ

ಕಳಪೆ ಕಾಮಗಾರಿಗೆ ನೀರಾವರಿ ಕಾಲುವೆ ಬಲಿ; ಎಂ.ಎಸ್.ಕೋರಿಶೆಟ್ಟರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಇಲ್ಲಿನ ಹೆಗ್ಗೇರಿ ಕೆರೆ ರಸ್ತೆಯ ದಾನೇಶ್ವರಿ ನಗರದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ನೀರಾವರಿ ಕಾಲುವೆಗಳು ತೀರಾ ಕಳಪೆಯಾಗಿದ್ದು, ಕಾಲುವೆ ತುಂಬಾ ಗಿಡ, ಕಂಟಿ ಬೆಳೆದು ನೀರು ಹರಿಯಲಾಗದಂತಾಗಿದೆ.

ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲೆಂದು ನಗರಸಭೆಯಿಂದ ಸುಂಆರು 100 ಮೀಟರ್ ಉದ್ದದ ಕಾಲುವೆ ನಿರ್ಮಿಸಲಾಗಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 57 ಲಕ್ಷ ರೂ. ಹಾಗೂ ಮತ್ತೊಂದು ಹಂತದಲ್ಲಿ 33.75 ಲಕ್ಷ ರೂ. ಸೇರಿ ಒಟ್ಟು 90 ಲಕ್ಷ ರೂ. ಖರ್ಚು ಮಾಡಿ ಕಾಲುವೆ ನಿರ್ಮಿಸಲಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಾಲುವೆಯಲ್ಲಿ ನೀರು ಹರಿಯದಾಗಿದೆ. ಕಾಲುವೆ ತುಂಬ ಕಳೆ ಸೃಷ್ಟಿಯಾಗಿದೆ. ಕಲ್ಲು, ಮಣ್ಣು, ಕಸ ತುಂಬಿಕೊಂಡಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷೃ ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದಾಗಿ ಸಾರ್ವಜನಿಕರ ಹಣ ದುರ್ಬಳಕೆಯಾಗಿದೆ.

ಹಾನಗಲ್ಲ ರಸ್ತೆಯಿಂದ ಪೂರ್ವಕ್ಕೆ ಹರಿದು ಬರುವ ಮಳೆ ನೀರು ಕೆರಿಮತ್ತಿಹಳ್ಳಿ ರಸ್ತೆ, ಮಲ್ಲಾಡದ ಆಸ್ಪತ್ರೆ, ವೀರಶೈವ ಲಿಂಗಾಯತ ಸ್ಮಶಾನ, ದಾನೇಶ್ವರಿ ನಗರ, ತಾಜ್ ನಗರ, ಮುರುಘಾರಾಜೇಂದ್ರ ನಗರ, ಹಾಗೂ ಮೆಹಬೂಬನಗರ ಮಾರ್ಗವಾಗಿ ಮೈಲಾರ ಮಹದೇವಪ್ಪ ಸ್ಮಾರಕ ಭವನದ ಬಳಿಕ ಕಾಲುವೆಗೆ ಸೇರಬೇಕು. ವೈಜ್ಞಾನಿಕವಾಗಿ ಡ್ರೈನೇಜ್ ಮಾಡದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಬಾಲಕ ಸಾವಿನಂಥ ದುರ್ಘಟನೆಗಳು ಸಂಭವಿಸುತ್ತಿವೆ. ಇನ್ನಾದರೂ ಕಾಲುವೆ, ಒಳಚರಂಡಿ ಸಮಸ್ಯೆಗೆ ಮುಕ್ತಿ ನೀಡಬೇಕು.

- ಎಂ.ಎಸ್.ಕೋರಿಶೆಟ್ಟರ, ಸಾಮಾಜಿಕ ಕಾರ್ಯಕರ್ತ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ)