ಜಿಲ್ಲೆ

ಷೇರ್ ಮಾರ್ಕೆಟ್ ಹೆಸರಲ್ಲಿ ವಂಚಿಸಿದ್ದವ ಅಂದರ್; ಪ್ರತಿದಿನ ಶೇ.2ಕ್ಕಿಂತ ಹೆಚ್ಚು ಲಾಭಾಂಶ ಕೊಡುವುದಾಗಿ ಮೋಸ

ಹಾವೇರಿ: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ 5.38 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬ್ಯಾಡಗಿ ಗಾಂಧೀ ನಗರ ಮೂಲದ ಹಾವೇರಿ ಬಸವೇಶ್ವರ ನಗರದ 17ನೇ ಕ್ರಾಸ್ ನಿವಾಸಿ ಚಂದ್ರಪ್ಪ ಶಿವಪ್ಪ ತೋಟದ (34) ಬಂಧಿತ ಆರೋಪಿ.

ನಮ್ಮಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಪ್ರತಿದಿನ ಶೇ.2ಕ್ಕಿಂತ ಹೆಚ್ಚಿನ ಲಾಭ ನೀಡುತ್ತೇನೆ ಎಂದು ಚಂದ್ರಪ್ಪ ನಂಬಿಸಿ ಹಾನಗಲ್ಲ ತಾಲೂಕು ಸೀಗೆಹಳ್ಳಿ ನಿವಾಸಿ ಮನೋಜ ಹಾದಿಮನಿ ಎಂಬುವರ ಬ್ಯಾಂಕ್ ಖಾತೆಯಿಂದ 2024ರ ಫೆಬ್ರವರಿಯಲ್ಲಿ 5,38,500 ರೂ. ವರ್ಗಾಯಿಸಿಕೊಂಡಿದ್ದ. ಬಳಿಕ ಅಸಲು ಹಾಗೂ ಲಾಭವನ್ನು ಕೊಡದೇ ವಂಚಿಸಿದ್ದಾನೆ ಎಂದು ಚಂದ್ರಪ್ಪನ ವಿರುದ್ಧ ಮನೋಜ ಅವರು ಹಾವೇರಿ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು.

ಸಿಇಎನ್ ಠಾಣೆ ಪೊಲೀಸ್ ಉಪಾಧೀಕ್ಷಕಿ ಪ್ರಗ್ಯಾ ಆನಂದ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಶಿವಶಂಕರ ಗಣಾಚಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ ಆರೋಪಿಯನ್ನು ಹುಬ್ಬಳ್ಳಿಯ ಭೈರಿದೇವರಕೊಪ್ಪದ ಲೇಕ್‌ವೀವ್ ನಗರದಲ್ಲಿ ಬಂಧಿಸಿದೆ. ಸಿಬ್ಬಂದಿ ನಾಗೇಂದ್ರ ಹಾನಗಲ್ಲ, ಪಿ.ಆರ್ ಬಾವಿಕಟ್ಟಿ, ಎಚ್.ಬಿ ಭರಮಗೌಡ್ರ, ಇತರರು ತಂಡದಲ್ಲಿದ್ದರು.

ವಂಚನೆಗೀಡಾದವರು ಮಾಹಿತಿ ಕೊಡಿ

ಆರೋಪಿ ಚಂದ್ರಪ್ಪ ತೋಟದ ಧನುಷ್ ಸ್ಟಾಕ್ಸ್ ಇನ್ವೆಸ್ಟಮೆಂಟ್ (ಡಿ ಸ್ಟಾಕ್ಸ್) ಎಂಬ ಹೆಸರಿನಲ್ಲಿ ನಕಲಿ ಕಂಪನಿ ಮಾಡಿಕೊಂಡಿದ್ದ. ನಕಲಿ ರಶೀದಿ, ನಕಲಿ ಠೇವಣಿ ಭದ್ರತಾ ಪತ್ರ ಹಾಗೂ ನಕಲಿ ದಾಖಲೆಗಳನ್ನು ನೀಡಿ ಇನ್ನೂ ಕೆಲವರಿಗೆ ವಂಚಿಸಿದ ಕುರಿತು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಈ ರೀತಿ ವಂಚನೆಗೀಡಾದ ಸಾರ್ವಜನಿಕರು, ಸೂಕ್ತ ದಾಖಲೆಗಳೊಂದಿಗೆ ಹಾವೇರಿ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಎಸ್‌ಪಿ ಅಂಶುಕುಮಾರ ತಿಳಿಸಿದ್ದಾರೆ.