ಹಾವೇರಿ: ಶಿಗ್ಗಾಂವಿ ರಾಷ್ಟ್ರೀಯ ಹೆದ್ದಾರಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಬೆಂಗಳೂರಿನ ನಿವಾಸಿ, ಸಿಆರ್‌ಪಿಎಫ್ ಯೋಧ ತಾರೇಶ ಎನ್.ಬಿ. ಮೃತದೇಹದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೋಟ್ಯಂತರ ರೂ. ಜೀವವಿಮೆಗಾಗಿ ಕೊಲೆ ನಡೆದಿರಬಹುದು ಹಾಗೂ ಈ ಸಾವಿಗೆ ತಾರೇಶನ ಹೆಂಡತಿ ಹಾಗೂ ಆಕೆಯ ಸಹೋದರ ಕಾರಣ ಎಂದು ತಾರೇಶನ ತಂದೆ ಬಸವರಾಜ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸಿಕೆರೆ ಮೂಲದ ತಾರೇಶ ಎನ್.ಬಿ. ಕಳೆದ 17 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಛತ್ತೀಸ್‌ಘಡದಲ್ಲಿ ಎಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 7 ವರ್ಷದ ಹಿಂದೆ ದಿವ್ಯಾ ಜತೆಗೆ ಮದುವೆ ಆಗಿದ್ದು, ಐದು ವರ್ಷದ ಮಗ ಇದ್ದಾನೆ ಎಂದರು.
ತನ್ನ ತಾಯಿಯ ಕಾಲಿನ ಆಪರೇಷನ್ ಸಲುವಾಗಿ ಜೂನ್ 18ರಂದು ತಾರೇಶ ಛತ್ತೀಸಘಡದಿಂದ ಬೆಂಗಳೂರಿನ ನಾಗರಬಾವಿಯ ಮನೆಗೆ ಬಂದಿದ್ದರು. ಬೆಂಗಳೂರಿನ ಮನೆಯಲ್ಲಿ ತಾರೇಶ, ಪತ್ನಿ, ಮಗು ವಾಸವಿದ್ದರು. ಅಂದು ಬೆಳಗ್ಗೆ ತಾನು ಬಂದು ನಮಗೂ ಬರಲು ಹೇಳಿದ್ದ. ಆದರೆ, ನಾವು ಬರುವಷ್ಟರಲ್ಲಿ ಮಗನನ್ನು ಶಾಲೆಗೆ ಬಿಡುವುದಾಗಿ ಹೋದವನು ಬಂದೇ ಇಲ್ಲ ಎಂದು ಸೊಸೆ ತಿಳಿಸಿದಳು. ಸಂಜೆ ಚಂದ್ರಾ ಲೇಔಟ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದೆವು. ಆದರೆ, ಜೂನ್ 22ರಂದು ಶಿಗ್ಗಾಂವಿ ಬಳಿ ಮಗನ ಮೃತದೇಹ ಪತ್ತೆಯಾಗಿದ್ದು ತಿಳಿಯಿತು ಎಂದರು.
ಆಲ್ಕೋಹಾಲ್ ಸೇವಿಸಿದ್ದು, ವಿಷಾಹಾರದಿಂದ ಹಾಗೂ ಉಸಿರುಗಟ್ಟಿ ಮೃತಪಟ್ಟಿರುವ ಕುರಿತು ಮರಣೋತ್ತರ ಪರೀಕ್ಷೆಯಲ್ಲಿ ವರದಿ ಬಂದಿದೆ ಎಂದು ಪೊಲೀಸರು ತಿಳಿಸಿದರು. ಮಗನ ಸಾವಿನ ತನಿಖೆ ಕುರಿತು ಶಿಗ್ಗಾಂವಿ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಕುರಿತು ಎಸ್‌ಪಿ ಅವರಿಗೆ ಮನವಿ ಮಾಡಲಾಗಿದೆ. ನನ್ನ ಮಗನಿಗೆ ಕುಡಿತ, ಸಿಗರೇಟು ಚಟ ಇಲ್ಲ. ಆತನ ಹೆಸರಲ್ಲಿ ಮೂರು ತಿಂಗಳ ಹಿಂದೆ 2 ಅಥವಾ 3 ಕೋಟಿ ರೂ. ಜೀವವಿಮೆ ಮಾಡಿಸಿರುವ ಮಾಹಿತಿ ಸಿಕ್ಕಿದೆ. ಈ ಹಣಕ್ಕಾಗಿ ಆತನ ಹೆಂಡತಿ ದಿವ್ಯಾ ಮತ್ತು ಆಕೆಯ ಅಣ್ಣ ದಿಲೀಪ ಸೇರಿ ಈ ಕೃತ್ಯ ಎಸಗಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿ ಮಗನ ಸಾವಿಗೆ ನ್ಯಾಗ ಕೊಡಿಸಬೇಕು ಎಂದು ತಾರೇಶ ತಂದೆ ಬಸವರಾಜ ಹಾಗೂ ತಾಯಿ ಮಂಜುಳಾ ಕಣ್ಣೀರಿಟ್ಟರು.
ಕೋಟ್:
ಶಿಗ್ಗಾಂವಿಯಲ್ಲಿ ತಾರೇಶ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರ ತಂದೆ ಬಸವರಾಜ ಅವರ ಆರೋಪಗಳ ಆಧಾರದಲ್ಲೂ ತನಿಖೆ ನಡೆಸಲಾಗುವುದು. ಮದ್ಯ ಸೇವನೆ, ವಿಷಾಹಾರದಿಂದ ಸಾವು ಸಂಭವಿಸಿರುವ ಕುರಿತು ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಕ್ಕಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಮರಣೋತ್ತರ ಪರೀಕ್ಷೆ ಮಾಡಿ ವೈದ್ಯರ ಮೇಲೆ ಸಂಶಯ ಇದ್ದರೆ ಆ ಕುರಿತೂ ಪರಿಶೀಲಿಸಲಾಗುವುದು.
- ಯಶೋಧಾ ವಂಟಗೋಡಿ, ಎಸ್‌ಪಿ