ಜಿಲ್ಲೆ

ರೈತರ ಬೆಳೆವಿಮೆ ಪರಿಹಾರ ಬಿಡುಗಡೆಗೊಳಿಸಿ; ಕೇಂದ್ರ ಕೃಷಿ ಸಚಿವರಿಗೆ ಸಂಸದ ಬೊಮ್ಮಾಯಿ ಪತ್ರ

ಹಾವೇರಿ: ಜಿಲ್ಲೆಯ ರೈತರ ಬೆಳೆ ವಿಮೆಯನ್ನು ಪಿಎಂಎಫ್‌ಬಿವೈ ಯೋಜನೆ ಅಡಿಯಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಿ ಪರಿಹಾರ ಕೊಡಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ ಸಿಂಗ್ ಚೌಹಾಣ ಅವರಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ.
ಜಿಲ್ಲೆಯ ರೈತರು 2023-24ನೇ ಸಾಲಿನ ಮುಂಗಾರಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವರ್ಷ ಕಳೆದರೂ ಅವರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರ ದೊರೆತಿಲ್ಲ. ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರವನ್ನು ವಿತರಿಸಲು ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಕಂಪನಿ ಕೆಲವೊಂದು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಅದಕ್ಕೆ ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ಸಮರ್ಪಕ ಉತ್ತರ ಸಲ್ಲಿಸಿದೆ. ಈ ಕಂಪನಿ ಎತ್ತಿರುವ ಆಕ್ಷೇಪಗಳು ನ್ಯಾಯಸಮ್ಮತವಾಗಿಲ್ಲ, ಅಲ್ಲದೇ ವಿಮೆ ಪರಿಹಾರ ನೀಡಲು ಅನಗತ್ಯ ವಿಳಂಬ ತಂತ್ರ ಅನುಸರಿಸುತ್ತಿರುವಂತೆ ಕಾಣಿಸುತ್ತಿದೆ.
ಈ ಕಂಪನಿಗೆ ಒಟ್ಟು 2023-24ನೇ ಸಾಲಿನ ಬೆಳೆ ವಿಮೆ ಮೊತ್ತವನ್ನು 260.94 ಕೋಟಿ ರೂ. ಪಾವತಿಸಲಾಗಿದ್ದು, ಅದರಲ್ಲಿ ವಿಮೆ ಕ್ಲೇಮ್ ಮೊತ್ತ 132.65 ಕೋಟಿ ರೂ. ಆಗಿದ್ದು, ಉಳಿದ 66.05 ಕೋಟಿ ರೂ. ಮೊತ್ತವನ್ನು ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಯು 24.04.2024ರ ನಡವಳಿಯಲ್ಲಿ ಶಿಫಾರಸ್ಸು ಮಾಡಿದೆ.
ಜಿಲ್ಲೆಯ ರೈತರು ಈಗಾಗಲೇ ಬರ ಹಾಗೂ ಪ್ರವಾಹದಿಂದ ತತ್ತರಿಸಿದ್ದು, ಇದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ತಾವು ಇದೇ ಆ.22ಎಂದು ನಡೆಯುವ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ವೈಯಕ್ತಿಯ ಆಸಕ್ತಿ ವಹಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ಕೊಡೆಸಿ ರೈತರ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲು ಕ್ರಮ ವಹಿಸಬೇಕು ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ.