ಜಿಲ್ಲೆ

ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 20 ವರ್ಷ ಸಜೆ; ಅಪ್ರಾಪ್ತೆಗೆ ಕಿರುಕುಳಕ್ಕೆ ಸಹಕರಿಸಿದ್ದವನೂ ಕಂಬಿ ಹಿಂದೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 39 ಸಾವಿರ ರೂ. ದಂಡ ವಿಧಿಸಿ ಹಾವೇರಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ನ್ಯಾಯಾಲಯದ ನ್ಯಾಯಾಧೀಶ ನಿಂಗೌಡ ಪಾಟೀಲ ಬುಧವಾರ ತೀರ್ಪು ನೀಡಿದ್ದಾರೆ.
ಮುಂಡಗೋಡ ತಾಲೂಕಿನ ಹರಗನಹಳ್ಳಿ ಗ್ರಾಮದ ಮೈಲಾರೆಪ್ಪ ನಿಂಗಪ್ಪ ಗೋಮಾಳ ಲೈಂಗಿಕ ದೌರ್ಜನ್ಯ ಎಸಗಿದವ. ಮಂಜುನಾಥ ಸುಭಾಸ ತೊಗರಳ್ಳಿ ಆತನಿಗೆ ಸಹಕರಿಸಿದವ.
ಮೈಲಾರೆಪ್ಪ ಅಪ್ರಾಪ್ತೆಗೆ ಆಗಾಗ ಫೋನ್, ಮೇಸೆಜ್ ಮಾಡುತ್ತಿದ್ದ. ನವೆಂಬರ್ 8, 2021ರಂದು ಬಾಲಕಿಯ ಶಾಲೆಯ ಹತ್ತಿರ ಮಂಜುನಾಥ ತೊಗರಳ್ಳಿಯೊಂದಿಗೆ ಬೈಕ್ ಮೇಲೆ ಬಂದಿದ್ದ. ಬಾಲಕಿಯನ್ನು ಅಪಹರಿಸಿಕೊಂಡು ಶಿರಸಿಗೆ ಹೋಗಿದ್ದ. ಅಲ್ಲಿಂದ ಧರ್ಮಸ್ಥಳ, ಉಜಿರೆಗೆ ಕರೆದುಕೊಂಡು ಹೋಗಿ ಶಿರೋಡ ಲಾಡ್ಜ್‌ನಲ್ಲಿ ಎರಡು ದಿವಸ ಬಾಲಕಿಯ ಮೇಲೆ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹಾನಗಲ್ಲ ವೃತ್ತದ ತನಿಖಾಧಿಕಾರಿ ಡಿವೈಎಸ್‌ಪಿ ಎಂ.ಎಸ್.ಪಾಟೀಲ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ, 39 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ 20 ಸಾವಿರ ರೂ. ಪರಿಹಾರ ಹಾಗೂ ರಾಜ್ಯ ಸರ್ಕಾರದ ನೊಂದವರ ಪರಿಹಾರ ನಿಧಿಯಿಂದ 4,00,000 ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು.